ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಬಿಸಿರೋಡು ಬಸ್ ನಿಲ್ದಾಣದ ಮುಂಭಾಗದಲ್ಲಿ ಹಾಗೂ ರೈಲ್ವೆ ಮೇಲ್ಸೇತುವೆಯ ಭಾಗದಲ್ಲಿ ಮಳೆಗಾಳದ ಆರಂಭದ ದಿನಗಳಲ್ಲಿ ಬಿದ್ದಿದ್ದ ಬೃಹತ್ ಹೊಂಡಗಳನ್ನು ಇಂದು ಹೆದ್ದಾರಿ ಇಲಾಖೆಯ ಮೊಗರೋಡಿ ಕನ್ಸ್ಂಕ್ಸ್ನ್ ಅಧಿಕೃತ ಗುತ್ತಿಗೆ ಸಂಸ್ಥೆಯಿಂದ ಮುಚ್ಚಲಾಗಿದೆ.

ಮಂಗಳೂರಿನಿಂದ ಬಿಸಿರೋಡು ವರೆಗೆ ಹೆದ್ದಾರಿಯ ನಿರ್ವಹಣೆ ವಹಿಸಿಕೊಂಡ ಮೊಗರೊಡಿ ಕಂಪೆನಿಯವರು ಎರಡು ದಿನಗಳಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ಕೈಗೊಂಡಿದ್ದಾರೆ. ಬಿಸಿರೋಡು ಬಸ್ ನಿಲ್ದಾಣ ಹಾಗೂ ರೈಲ್ವೇ ಮೇಲ್ಸೇತುವೆಯಲ್ಲಿ ಬಿದ್ದ ಗುಂಡಿಗಳಿಂದ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು.

ಈ ಬಾರಿ ಸುರಿದ ಬಾರೀ ಮಳೆಯಿಂದ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿತ್ತು. ಇದೀಗ ಮಳೆ ಕೊಂಚ ಕಡಿಮೆಯಾದ ಕೂಡಲೇ ರಸ್ತೆಯಲ್ಲಿರುವ ಗುಂಡಿಗಳಿಗೆ ಡಾಮರು ಹಾಕಿ ತಾತ್ಕಾಲಿಕವಾಗಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ.



