ರಸ್ತೆಯಲ್ಲಿ ಬಿದ್ದು ಸಿಕ್ಕಿದ ಮನಿ ಪಾಕಟೆ ಒಂದನ್ನು ಸುರಕ್ಷಿತವಾಗಿ ವಾರಸುದಾರರಿಗೆ ಒಪ್ಪಿಸಿ ರಿಕ್ಷಾ ಚಾಲನೋರ್ವ ಮಾನವೀಯತೆ ಮೆರೆದಿದ್ದಾರೆ.

ಬಂಟ್ವಾಳ ತಾಲೂಕಿನ ನೆಟ್ಲ ನಿವಾಸಿಯಾಗಿರುವ ರಿಕ್ಷಾ ಚಾಲಕ ಪ್ರಸಾದ್ ಜೋಗಿ ಎಂಬವರು ಹಣದ ಹಾಗೂ ಪ್ರಮುಖ ದಾಖಲೆಗಳಿದ್ದ ಪರ್ಸ್ ನ್ನು ನೀಡಿ ಶಹಬ್ಬಾಸ್ ಎನಿಸಿಕೊಂಡಿದ್ದಾರೆ. ಅನಂತಾಡಿ ನಿವಾಸಿ ಧನ್ಯಶ್ರೀ ಎಂಬವರ ಸಾವಿರಾರು ರೂ ಹಣ ಹಾಗೂ ದಾಖಲೆಗಳಿದ್ದ ಪರ್ಸ್ ಮೆಲ್ಕಾರ್ ಸರ್ವೀಸ್ ರಸ್ತೆಯಲ್ಲಿ ಆ.12 ರಂದು ರಾತ್ರಿ 9 ಗಂಟೆ ವೇಳೆಗೆ ಕಳೆದುಹೋಗಿತ್ತು. ಮೆಲ್ಕಾರ್ ಸರ್ವೀಸ್ ರಸ್ತೆಯಲ್ಲಿ ಬಿದ್ದ ಪರ್ಸ್ ಪ್ರಸಾದ್ ಜೋಗಿಯವರಿಗೆ ಸಿಕ್ಕಿದ್ದು, ಪರ್ಸ್ ನೊಳಗಡೆ ಇದ್ದ ಆಧಾರ್ ಕಾರ್ಡ್ ನಲ್ಲಿ ಧನ್ಯಶ್ರೀ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದರು. ಇಂದು ಬೆಳಿಗ್ಗೆ ಧನ್ಯಶ್ರೀ ಅವರಿಗೆ ಪರ್ಸ್ ನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.



