ಗುರುಗಳು ಸಮಾಜದ ದೀಪಗಳು ಅವರಿಂದಲೇ ಜ್ಞಾನ, ಸಂಸ್ಕಾರ ಮತ್ತು ಮೌಲ್ಯಗಳ ಬೆಳಕು ಹರಡುತ್ತದೆ. ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅತಿ ಮಹತ್ತರ.

ಗುರುಗಳು ಕೇವಲ ಪಾಠ ಬೋಧಕರು ಮಾತ್ರವಲ್ಲ, ಅವರು ಜೀವನದ ನಿಜವಾದ ಮಾರ್ಗದರ್ಶಕರು. ಮೌಲ್ಯಗಳು ಜೀವಂತವಾಗಿರುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರ, ವಿದ್ಯಾರ್ಥಿಗಳು ಗುರುಗಳ ಸಲಹೆಗಳನ್ನು ಮನಸ್ಸಿನಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಮುಂದುವರಿಯಬೇಕು. ಶಿಕ್ಷಣದ ಅರ್ಥ ಅಂಕಗಳಲ್ಲ, ಅದು ಮಾನವೀಯತೆಯ ಬೆಳವಣಿಯ ರಹದಾರಿ, ಬಿಲ್ಲವ ಸಂಘದ ಶಿಸ್ತು ಬದ್ದ ಆಯೋಜನೆ ಮತ್ತು ಹೃದಯಸ್ಪರ್ಶಿ ಸ್ವಾಗತ ಸಮಾರಂಭವನ್ನು ಸ್ಮರಣೀಯವಾಗಿಸಿದೆ ಎಂದು ಮಂಗಳೂರಿನ ಡಯಟ್ ಸೆಂಟರ್‌ನ ಹಿರಿಯ ಉಪನ್ಯಾಸಕರಾದ ಡಾ. ತ್ರಿವೇಣಿ ತಿಳಿಸಿದ್ದಾರೆ. ಅವರು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನವೆಂಬರ್ 9 ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ “ಗುರುವಂದನಾ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ್ದಾರೆ.

ಬಂಟ್ವಾಳ ತಾಲೂಕಿನ ಬಿಲ್ಲವ ಸಮುದಾಯದ ಸರಕಾರಿ ಹಾಗೂ ಸರಕಾರೇತರ ಪ್ರಾಥಮಿಕ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ, ತಾಂತ್ರಿಕ, ವೈದ್ಯಕೀಯ ವಿಭಾಗದ ಒಟ್ಟು 195 ಬೋಧಕ-ಬೋಧಕಿಯರಿಗೆ “ಬಿಲ್ಲವ ಗುರುವಂದನಾ ಗೌರವಾಭಿನಂದನೆ” ಹಾಗೂ ಜಿಲ್ಲಾ, ರಾಜ್ಯ ರಾಷ್ಟ್ರ ಮಟ್ಟದ ಸಾಧಕ 10 ಗುರುಗಳಿಗೆ “ಬಿಲ್ಲವ ಗುರುವಂದನಾ ಪುರಸ್ಕಾರ” ಪ್ರದಾನ ಮಾಡಲಾಗಿದೆ. ಇನ್ನೂ ಈ ಸಂದರ್ಭದಲ್ಲಿ ಕ್ರೀಡಾಕೂಟದ ಸಂಚಾಲಕರಾದ ಬೇಬಿ ಕುಂದರ್ ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.



