ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಅಸ್ವಾಭಾವಿಕ ದೌರ್ಜನ್ಯ ಎಸಗಿದ ತಪ್ಪಿತಸ್ಥ ಉಪನ್ಯಾಸಕನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದರು.
ಕುಲೈ ನಿವಾಸಿ ಉಪನ್ಯಾಸಕ ಪೃಥ್ವಿರಾಜ್ (33) ಶಿಕ್ಷೆಗೊಳಗಾದ ವ್ಯಕ್ತಿ. 2014ರ ಆಗಸ್ಟ್ 1ರಿಂದ 2016ರ ಸೆಪ್ಟೆಂಬರ್ 2ರವರೆಗೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪದ ಮೇಲೆ ಪೃಥ್ವಿರಾಜ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೃಥ್ವಿರಾಜ್ ವಿದ್ಯಾರ್ಥಿಯನ್ನು ಮನೆಗೆ ಕರೆಸಿಕೊಂಡು ನಿರಂತರವಾಗಿ ದೌರ್ಜನ್ಯವೆಸಗಿದ್ದಾನೆ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಪರೀಕ್ಷೆಯಲ್ಲಿ ಅಂಕ ಮತ್ತು ಹಾಜರಾತಿ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಬಾಲಕನ ಗುಪ್ತಾಂಗಕ್ಕೆ ಗಾಯವಾದ ಹಿನ್ನಲೆಯಲ್ಲಿ ವೈದ್ಯಕೀಯ ಪರೀಕ್ಷೆ ಹಾಗು ಚಿಕಿತ್ಸೆಯ ವೇಳೆ ವಿದ್ಯಾರ್ಥಿ ತನಗಾದ ದೌರ್ಜನ್ಯದ ಬಗ್ಗೆ ವೈದ್ಯರಿಗೆ ಹಾಗು ಪೋಷಕರಿಗೆ ತಿಳಿಸಿದ್ದಾನೆ. ತಕ್ಷಣ ಸುರತ್ಕಲ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದ ಚೆಲುವರಾಜ್ ಬಿ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ, ಆರೋಪ ದೃಢಪಟ್ಟಿರುವುದರಿಂದ ತಪ್ಪಿತಸ್ಥನೆಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಅಪರಾಧಿ ಪೃಥ್ವಿರಾಜ್ ಗೆ ಪೋಕ್ಸೊ ಕಾಯ್ದೆ ಸೆಕ್ಷನ್ 6ರಡಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಕಠಿಣ ಸಜೆ, ಪೋಕ್ಸೊ ಸೆಕ್ಷನ್ 10ರಂತೆ 5 ವರ್ಷ ಸಾದಾ ಸಜೆ, ಐದು ಸಾವಿರ ರೂ ದಂಡ ಮತ್ತು ದಂಡ ಪಾವತಿಸಲು ತಪ್ಪಿದರೆ ಮೂರು ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 377ರಡಿ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ ಮೂರು ತಿಂಗಳ ಕಠಿಣ ಸಜೆ, ಐಪಿಸಿ 506ರಡಿ 1 ವರ್ಷ ಸಾದಾ ಸಜೆ, ಒಂದು ಸಾವಿರ ರೂ.ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಹೆಚ್ಚುವರಿ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ ವಿಧಿಸಿ ನ್ಯಾಯಾದೀಶೆ ಮಂಜುಳಾ ಶೆಟ್ಟಿ ತೀರ್ಪು ನೀಡಿದ್ದಾರೆ.



