ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಕಾಂಗ್ರೆಸ್ ಸಾಧನೆ ಬಗ್ಗೆ ವ್ಯಂಗ್ಯವಾಡಿದ ಶಾಸಕ ಕಾಮತ್..?!

“ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು” ಎಂದು ಚರ್ಚೆ ಆರಂಭಿಸಿರುವ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಸ್ವತಃ ತಾವೇ ಅದನ್ನು ಪಾಲಿಸುತ್ತಿದ್ದಾರಾ ಎಂಬುದನ್ನು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಮಂಗಳೂರು ದಕ್ಷಿಣ ಶಾಸಕ ಕಾಮತ್ ಕ್ಷೇತ್ರದ ಜವಾಬ್ದಾರಿಯುತ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅನುದಾನಗಳನ್ನು ತಂದಿದ್ದೇನೆ, ಮತ್ತು ಇಂದಿನ ಕಾಂಗ್ರೆಸ್ ಸರ್ಕಾರದ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಅನುದಾನಗಳು ಬಂದು ಯಾವ ಕಾಮಗಾರಿ ಅನುಷ್ಠಾನಗೊಂಡಿದೆ ಎಂಬುದರ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಆಗ ಅಭಿವೃದ್ಧಿ ವಿಚಾರದಲ್ಲಿ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಕ್ಷೇತ್ರದ ಜನತೆ ತೀರ್ಮಾನಿಸುತ್ತಾರೆ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-2 ರಡಿ 165 ಕೋಟಿ ರೂ.ಗಳ ಕಾಮಗಾರಿಯಾಗಿದ್ದು, ಅದಕ್ಕೆ ಹಣ ಎಲ್ಲಿಂದ ಬಂತು ಕಾಂಗ್ರೆಸ್ ನಾಯಕರು ಕೇಳಿದ್ದಾರೆ. ಪ್ರಶ್ನೆ ಕೇಳಿದ ಸ್ವತಃ ಅವರಿಗೇ ಉತ್ತರ ಗೊತ್ತಿದೆ. ಆದರೂ ಜನರಲ್ಲಿ ಗೊಂದಲ ಮೂಡಿಸುವ ವಿಫಲ ಯತ್ನ ನಡೆಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ-1ರ ಅಡಿಯಲ್ಲಿ 165 ಕೋಟಿ ರೂ. ಘೋಷಣೆಯಾಗಿತ್ತು ಎಂದವರು ಪತ್ರಿಕಾಗೋಷ್ಠಿಯಲ್ಲಿ ಅದಕ್ಕೆ ಸಂಬಂಧಿಸುವ ದಾಖಲೆಗಳನ್ನು ಪ್ರದರ್ಶಿಸಿದರು.

ಕಾಂಗ್ರೆಸ್ ಸರ್ಕಾರ ಮಂಗಳೂರು ಸಹಿತ ಎಲ್ಲಾ ಮಹಾನಗರ ಪಾಲಿಕೆಗಳಿಗೆ ಬಿಡುಗಡೆಯಾದ ಅನುದಾನಗಳಿಗೆ ತಡೆ ನೀಡಿತು. ಈಗ ಯೋಜನೆಯ ಹೆಸರಿನ ಮುಂದೆ “2” ಸೇರಿಸಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ ಎಂದು ಅಲ್ಲಲ್ಲಿ ಬ್ಯಾನರ್ ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಅದೇ ಯೋಜನೆ, ಅದೇ ಅನುದಾನ. ಹೆಸರು ಮಾತ್ರ ಬದಲಾವಣೆ ಅಷ್ಟೇ. ಇದು ಕಾಂಗ್ರೆಸ್ ಸಾಧನೆ.! ಎಂದೂ ಕಾಮತ್ ವ್ಯಂಗ್ಯವಾಡಿದರು.


ಹಿಂದಿನ ಯೋಜನೆಗೆ ತಡೆ ನೀಡಿದ್ದು ಯಾಕೆ? ಈಗ ಅದೇ ಯೋಜನೆಗೆ ಬೇರೆ ಹೆಸರು ನೀಡಿರುವುದು ಯಾಕೆ? ಹಾಗಾದರೆ ಇಲ್ಲಿ ರಾಜಕಾರಣ ಮಾಡುತ್ತಿರುವುದು ಯಾರು? ಎಂದೆಲ್ಲ ವೇದವ್ಯಾಸ ಕಾಮತ್ ಪ್ರಶ್ನೆಗಳ ಸುರಿಮಳೆಗೈದರು. ಇದರಲ್ಲಿ ಹಣಕಾಸು ಇಲಾಖೆಯ ಅನುಮೋದನೆ ಪಡೆಯದೇ, ಶಿಲಾನ್ಯಾಸ ನಡೆಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅವರು ಹಿಂದಿನ ಸರ್ಕಾರದ ಬಜೆಟ್ ಪುಟಗಳ ದಾಖಲೆಗಳನ್ನು ತಿರುವಿ ಹಾಕಿ ನೋಡಲಿ. 165 ಕೋಟಿ ರೂ.ಗಳ ಯೋಜನೆ ಬಜೆಟ್‌ನಲ್ಲೇ ಘೋಷಣೆಯಾಗಿದೆ ಎಂದವರು ಆ ಸಂಬಂಧಿತ ದಾಖಲೆಗಳನ್ನೂ ಪ್ರದರ್ಶಿಸಿದರು. ಹಣಕಾಸು ಇಲಾಖೆಯ ಅನುಮತಿ ನಂತರವೇ ಬಜೆಟ್ ನಲ್ಲಿ ಘೋಷಣೆಯಾಗಲು ಸಾಧ್ಯ ಎಂಬ ಕನಿಷ್ಠ ಜ್ಞಾನ ಇರುವ ಯಾರಿಗಾದರೂ ತಿಳಿದಿರುತ್ತದೆ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ಬಿಜೆಪಿ-ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಕೊಟ್ಟಿದ್ದೇವೆ ಎಂದು ಹೇಳುವ ಇವರು, ಅದರಿಂದ ಕ್ಷೇತ್ರದಲ್ಲಿ ಒಂದಾದರೂ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ಹಾಕಿದ, ಕಾಮಗಾರಿಯ ಟೆಂಡರ್ ಕರೆದ ದಾಖಲೆ ಕೊಡಬಲ್ಲರಾ? ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೂ ನೀಡಲೇಬೇಕಾದ ಅನುದಾನವನ್ನು ನೀಡಿ ಅದೇ ದೊಡ್ಡ ಸಾಧನೆ ಎಂಬಂತೆ ತೋರಿಸಿಕೊಳ್ಳುವುದರಲ್ಲಿ ಏನಿದೆ? ಯಾವ ಸರ್ಕಾರ ಇದ್ದರೂ ಕೊಡಲೇಬೇಕು. ನಮ್ಮ ಕ್ಷೇತ್ರಕ್ಕೆ ಯಾವುದಾದರೂ ವಿಶೇಷ ಅನುದಾನ ನೀಡಿದ್ದರೆ ಅದು ನಮ್ಮ ಸರ್ಕಾರದ ಸಾಧನೆ ಎಂದು ಜನತೆ ಮುಂದೆ ಇಡಲಿ ಎಂದೂ ಕಾಮತ್ ಕಾಂಗ್ರೆಸ್ಸಿಗೆ ಸವಾಲೆಸೆದರು. ವಿಶೇಷ ಯೋಜನೆ ಬರಬೇಕಾದರೆ ಪಕ್ಷಬೇಧ ಮರೆತು ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸೋಣ ಎಂದಿರುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಹಮತವಿದೆ. ಅದಕ್ಕೂ ಮೊದಲು ನಮ್ಮ ಕ್ಷೇತ್ರಕ್ಕೆ, ನಮ್ಮ ಜಿಲ್ಲೆಗೆ, ನಮ್ಮ ಕರಾವಳಿಗೆ ಈ ಬಾರಿಯ ಬಜೆಟ್‌ನಲ್ಲಿ ಏನು ನೀಡಬೇಕು ಎಂಬುದರ ಬಗ್ಗೆ ಮಾನ್ಯ ಸ್ಪೀಕರ್, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಕಾಂಗ್ರೆಸ್ ನಾಯಕರು, ಅಧಿಕಾರಿಗಳು ಬೆಂಗಳೂರಿನಲ್ಲಿ, ಮಂಗಳೂರಿನಲ್ಲಿ ಎರಡೆರಡು ಸಭೆ ಮಾಡಿದರೂ ಕೊನೆಗೆ ಏನೂ ಸಿಗಲಿಲ್ಲ. ನಿಮ್ಮ ಸರ್ಕಾರ ನಿಮಗೇ ಬೆಲೆ ನೀಡಿಲ್ಲವಾದ ಮೇಲೆ ನಮ್ಮ ಮಾತಿಗೆ ಬೆಲೆ ನೀಡುತ್ತದಾ? ಎಂದೂ ಕಾಮತ್ ಖಾರವಾಗಿ ಪ್ರಶ್ನಿಸಿದರು. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಒಂದೇ ದಿನ 70 ಕ್ಕಿಂತ ಹೆಚ್ಚು ಗುದ್ದಲಿ ಪೂಜೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿರುವ ದಾಖಲೆ ಇದೆ. ಆದರೆ ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಗುದ್ದಲಿ ಪೂಜೆ ನಡೆಯುವುದೂ ಸಹ ಕಷ್ಟವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಎಲ್ಲಾ ಅನುದಾನಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ತಡೆ ನೀಡಿತ್ತು. ನಂತರ ಸತತ ಪ್ರಯತ್ನದ ಫಲವಾಗಿ ಇದರಲ್ಲಿ ಕೆಲವೇ ಕೆಲವು ಕಾಮಗಾರಿಗಳು ಇದೀಗ ಮತ್ತೆ ಆರಂಭವಾಗುತ್ತಿವೆ. ಈಗ ಕಾಂಗ್ರೆಸ್ ನಾಯಕರು ನೋಡುತ್ತಿರುವುದು ಅಂತಹದೇ ಗುದ್ದಲಿ ಪೂಜೆಗಳು. ಹಾಗಾದರೆ ಅದು ಈಗಿನ ಕಾಂಗ್ರೆಸ್ ಸರ್ಕಾರದ ಅನುದಾನವಾಗುತ್ತದೆಯೇ? ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ.
4 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಹೂಳೆತ್ತುತ್ತಿದ್ದೇವೆ ಎಂದು ಭಾರೀ ಹುಮ್ಮಸ್ಸಿನಿಂದ ಹೇಳಿಕೆ ಕೊಡುವ ಕಾಂಗ್ರೆಸ್ ನಾಯಕರಿಗೆ, ಅದು ಪ್ರತೀ ವರ್ಷವೂ ನಡೆದೇ ನಡೆಯುತ್ತದೆ ಎಂಬುದರ ಅರಿವಿಲ್ಲವೇ? ಅದು ಮಹಾನಗರ ಪಾಲಿಕೆಯ ಅನುದಾನ. ಇಲ್ಲಿನ ಜನರ ತೆರಿಗೆಯ ಹಣ. ಇದನ್ನೂ ಸಹ ನಮ್ಮ ಸರ್ಕಾರದ ಸಾಧನೆ ಎನ್ನುವುದಾದರೆ, ನಾಳೆ ಇವರು ನಮ್ಮ ಸರ್ಕಾರ ನೀರು ಕೊಟ್ಟಿದೆ, ರಸ್ತೆ ಗುಂಡಿ ಮುಚ್ಚಿದೆ ಎಂದು ಹೇಳಿದರೂ ಆಶ್ಚರ್ಯವಿಲ್ಲ ಎಂದು ಪರಿಹಾಸ್ಯ ಮಾಡಿದರು.

10 ಕೋಟಿ ರೂ. ಮಳೆ ಹಾನಿಯ ಪರಿಹಾರ ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಇತ್ತು. ಈಗಲೂ ಇದೆ. ಅದರಲ್ಲೇನೂ ವಿಶೇಷತೆಯಿಲ್ಲ. ಮಳೆ ಹಾನಿಯ ಕುರಿತು ಸ್ಥಳೀಯ ಶಾಸಕರನ್ನು ಒಳಗೊಂಡು ಜಿಲ್ಲಾಧಿಕಾರಿಗಳು ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಅದರಂತೆ ಪರಿಹಾರಗಳು ಬರುತ್ತವೆ. ಅದು ಸ್ಥಳೀಯ ಶಾಸಕರ ಹಕ್ಕು. ಪರಿಹಾರದ ಆದೇಶದಲ್ಲಿಯೂ ಮಂಗಳೂರು ನಗರ ದಕ್ಷಿಣದ ಶಾಸಕರ ಹೆಸರು ಉಲ್ಲೇಖವಿದೆ. ಅದರಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ವಿಶೇಷ ಸಾಧನೆ ಎಂದು ಬಿಂಬಿಸುವುದರಲ್ಲಿ ಏನಿದೆ? ನಾನೇ ಸರಕಾರದಿಂದ ಪರಿಹಾರಗಳು ತಂದಿದ್ದು ಅಂತ ಎಲ್ಲೆಡೆ ಸ್ಥಳ ವೀಕ್ಷಣೆ ನಡೆಸಿ, ಬ್ಯಾನರ್ ಹಾಕಿಕೊಂಡು, ಪತ್ರಿಕಾ ಹೇಳಿಕೆ ನೀಡುವುದು ಯಾವ ಸೀಮೆಯ ರಾಜಕಾರಣ? ನಗರದಲ್ಲಿ ಅಮೃತ ಯೋಜನೆ, ಜಲಸಿರಿ, ಹಾಗೂ ಒಳಚರಂಡಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ವಾಸ್ತವದಲ್ಲಿ ಅದು ಕೇಂದ್ರ ಸರ್ಕಾರದ ಯೋಜನೆಗಳು. ಅನುದಾನಗಳನ್ನು ನೀಡಿದ್ದೂ ಸಹ ಕೇಂದ್ರ ಸರ್ಕಾರ. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಯೋಜನೆಗಳಿಗೆ ಅನುದಾನ ಕೊಟ್ಟ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ ಎಂದು ಕಾಮತ್ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯುದ್ದಕ್ಕೂ ಕಾಂಗ್ರೆಸ್ ನಾಯಕರನ್ನು ವ್ಯಾಪಕವಾಗಿ ವ್ಯಂಗ್ಯ ಮಾಡುತ್ತ, ದಾಖಲೆಗಳನ್ನು ಪ್ರದರ್ಶಿಸುತ್ತ ಕಾಮತ್ ರಾಜ್ಯ ಸರಕಾರದ ವಿರುದ್ದ ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಜೇಶ್ವರ: ಏ. 19ರಂದು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ & ರಕ್ತದಾನ ಶಿಬಿರ..!

ಹುಣಸೂರು: ಹುಣಸೂರು ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ….!

ಉಡುಪಿ: ಲಾರಿ- ಕಾರು ಮಧ್ಯೆ ಭೀಕರ ಅಪಘಾತ: ಓರ್ವ ಮೃ*ತ್ಯು…!

ಕಡಬ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನ ಆತ್ಮಹ*ತ್ಯೆ..!

ಬಂಟ್ವಾಳ: ಕುಕ್ಕಾಜೆಯಲ್ಲಿ ಭೀಕರ ಅಪಘಾ*ತ; ಸಹಸವಾರ ಸ್ಥಳದಲ್ಲಿಯೇ ಮೃತ್ಯು..!

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

error: Content is protected !!