ಸರಕಾರಿ ಪ್ರೌಢ ಶಾಲೆ, ಮಂಚಿ – ಕೊಳ್ನಾಡು ಮತ್ತು ಹಿರಿಯ ವಿದ್ಯಾರ್ಥಿ ಸಂಘ ಮಂಚಿ ಕೊಳ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕದ ಸಹಯೋಗದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ನಾಟ್ಯ ತರಗತಿಯ ಯಕ್ಷಧ್ರುವ ಯಕ್ಷ ಶಿಕ್ಷಣ – 2026 ಕಾರ್ಯಕ್ರಮವು ದಿನಾಂಕ: 19.06.2026 ರ ಶಾಲಾ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ದೀಪ ಬೆಳಗಿ ಉದ್ಘಾಟಿಸಿದ ಶಾಲಾ ಹಿರಿಯ ವಿದ್ಯಾರ್ಥಿ, ಯಕ್ಷಗಾನ ಕಲಾವಿದೆ ಹಾಗೂ ಶಿಕ್ಷಕಿಯಾಗಿರುವ ಶ್ರೀಮತಿ ಶಾಲಿನಿ ಶೆಟ್ಟಿ ಮಾತನಾಡಿ, “ಪಟ್ಲ ಫೌಂಡೇಶನ್ ವತಿಯಿಂದ ನಡೆಸಲಾಗುವ ಉಚಿತ ಯಕ್ಷ ಶಿಕ್ಷಣ ಯೋಜನೆಯು ಮಕ್ಕಳ ಪ್ರತಿಭೆ ಮತ್ತು ಬೌದ್ಧಿಕ ವಿಕಾಸಕ್ಕೆ ಮಾತ್ರವಲ್ಲದೆ ಸಂಸ್ಕಾರದ ಗುಣವನ್ನು ಬೆಳೆಸುವಲ್ಲಿಯೂ ಸಹಕಾರಿಯಾಗಿದೆ.

ಗ್ರಾಮೀಣ ಭಾಗದ ಸರಕಾರಿ ಶಾಲೆಯ ಮಕ್ಕಳು ಕೂಡ ಯಕ್ಷಗಾನ ಕಲೆಯನ್ನು ಕಲಿಯುವ ಅವಕಾಶ ದೊರೆತಿರುವುದು ವಿದ್ಯಾರ್ಥಿಗಳ ಭಾಗ್ಯದ ಜೊತೆಗೆ ಕರಾವಳಿ ಭಾಗದ ಈ ವಿಶಿಷ್ಟ ಕಲೆಯನ್ನು ಉಳಿಸಿ ಬೆಳೆಸುವಂತಾಗಲಿದೆ.” ಎಂದಿದ್ದಾರೆ. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಪಟ್ಲ ಫೌಂಡೇಶನ್ ಸಂಸ್ಥೆಯ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಮಾತನಾಡಿ, “ವಿದ್ಯಾರ್ಥಿ ದೆಸೆಯಲ್ಲಿ ಕಲಾಸ್ವಾದನೆಯ ಜೊತೆಗೆ ಕಲೆಗಳನ್ನು ಕರಗತ ಮಾಡಿಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಂಡಲ್ಲಿ ಬದುಕಿನ ದಾರಿಗೆ ಮೌಲ್ಯವನ್ನು ಕಂಡುಕೊಳ್ಳಬಹುದು” ಎಂದಿದ್ದಾರೆ.



