ಶಾಸಕ ಅಶೋಕ್ ಕುಮಾರ್ ರೈ ಅವರ ಮಹತ್ವಾಕಾಂಕ್ಷೆಯ ‘ಅಶೋಕ ಜನಮನ’ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಸಂಭ್ರಮದ ಅಂಗವಾಗಿ ನವೆಂಬರ್ 8ರಂದು ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ವಸ್ತ್ರ ವಿತರಣೆ ಹಾಗೂ ಫಲಾನುಭವಿಗಳ ವಾರ್ಷಿಕ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಕ್ರೀಡಾಂಗಣದಲ್ಲಿ ಚಪ್ಪರ ಮುಹೂರ್ತ ನೆರವೇರಿತು.

ಚಪ್ಪರ ಮುಹೂರ್ತದ ಬಳಿಕ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಇದು 14ನೇ ವರ್ಷದ ಅಶೋಕ ಜನಮನ ಕಾರ್ಯಕ್ರಮವಾಗಿದೆ. ಕಳೆದ ವರ್ಷ ಮಳೆಯಿಂದಾಗಿ ತೊಂದರೆಯಾಗಿದ್ದು, ಈ ಬಾರಿ ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ ಶೀಟ್ ಅಳವಡಿಸಲಾಗುವುದು ಎಂದರು.
ಬೆಳಗ್ಗೆ 9.30ಕ್ಕೆ ವಸ್ತ್ರ ವಿತರಣೆ ಆರಂಭವಾಗಲಿದ್ದು, ಮೂರು ಪ್ರತ್ಯೇಕ ಕೌಂಟರ್ಗಳ ಮೂಲಕ ಬಟ್ಟಲು-ತಟ್ಟೆ, ಮಹಿಳೆಯರಿಗೆ ಗುಣಮಟ್ಟದ ಸೀರೆ ಹಾಗೂ ಬೆಡ್ಶೀಟ್ಗಳನ್ನು ವಿತರಿಸಲಾಗುವುದು. ಪುತ್ತೂರು ಕ್ಷೇತ್ರದ ಪ್ರತಿಯೊಂದು ಮನೆಗೂ ಆಮಂತ್ರಣ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಗೊಂದಲ ಉಂಟಾಗದಂತೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಆಗಮಿಸುವ ನಿರೀಕ್ಷೆಯಿದೆ. ಸುಮಾರು 70 ಸಾವಿರ ಮಂದಿಗೆ ದೋಸೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗಿನಿಂದ ಉಪಾಹಾರ, ಮಧ್ಯಾಹ್ನ ಭೋಜನ ಹಾಗೂ ಸಂಜೆ 3 ಗಂಟೆಯ ಬಳಿಕ ದೋಸೆ ಮೇಳ ಆಯೋಜಿಸಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ವಿವಿಧ ಸಚಿವರು, ಗಣ್ಯರನ್ನು ಆಹ್ವಾನಿಸುವ ಉದ್ದೇಶವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸುಮಾ ಎ. ರೈ, ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



