ಮಂಗಳೂರು : ಕಂಕನಾಡಿ ಸಮೀಪದ ಅಳಪೆ ಪಡ್ಡು ಎಂಬಲ್ಲಿ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಕೆರೆಯಂತಿರುವ ದೊಡ್ಡ ಹೊಂಡವೊ0ದಿದ್ದು, ಇಲ್ಲಿ ನೆರೆ ನೀರು ನಿಂತು ಅಪಾಯಕಾರಿಯಾಗಿದೆ.

ಆದರೆ ಸ್ಥಳೀಯರು ರೈಲ್ವೇ ಇಲಾಖೆಗೆ ಇದನ್ನು ಮುಚ್ಚುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರೂ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸುರತ್ಕಲ್‌ನತ್ತ ಸಾಗುವ ದಾರಿ ಮಧ್ಯೆ ಸಿಗುವ ಎಕ್ಕೂರು ಅಳಪೆ ಪಡ್ಡು ಎಂಬ ಜಾಗದ ರೈಲು ಹಳಿಗಳ ಪಕ್ಕದಲ್ಲೇ ನಾಲ್ಕು ವರ್ಷಗಳ ಹಿಂದೆ ಸುಮಾರು ಒಂದು ಎಕ್ಕರೆ ವಿಸ್ತಾರಕ್ಕೆ ಮಣ್ಣು ತೆಗೆದು ಭಾರೀ ಹೊಂಡ ನಿರ್ಮಾಣವಾಗಿದೆ. ಇದೇ ಹೊಂಡ ಇದೀಗ ಇಬ್ಬರು ಯುವಕರ ಜೀವವನ್ನು ಬಲಿ ಪಡೆದಿದೆ. ಆಕಸ್ಮಿಕವಾಗಿ ಈ ಹೊಂಡಕ್ಕೆ ಬಿದ್ದ ಪಡೀಲ್ ಅಳಪೆ ಪಡ್ಡು ರೆಂಜ ನಿವಾಸಿ ವರುಣ್ (27) ಮತ್ತು ಎಕ್ಕೂರು ಕೆಎಚ್‌ಬಿ ಕಾಲನಿ ನಿವಾಸಿ ವೀಕ್ಷಿತ್ (28) ಸಾವನ್ನಪ್ಪಿದ್ದರು. ಮನೆಯ ಆಧಾರಸ್ತಂಭವಾಗಿದ್ದ ಇಬ್ಬರನ್ನೂ ಹೊಂಡ ಬಲಿ ಪಡೆದುಕೊಂಡಿದೆ. ರೈಲ್ವೇ ಇಲಾಖೆ ಅಂದೇ ಎಚ್ಚೆತ್ತುಕೊಂಡು ಇದನ್ನು ಮುಚ್ಚಿದ್ದರೆ ಇಂದು ಈ ದುರಂತ ನಡೆಯುತ್ತಿರಲಿಲ್ಲ. 20 ಅಡಿ ಆಳವಿರುವ ಈ ಹೊಂಡ ಯುವಕರನ್ನು ಸೆಳೆಯುತ್ತಿದೆ. ಇದರಲ್ಲಿ ಈಜಾಡಲು ಅಕ್ಕಪಕ್ಕದ ಊರಿನವರೂ ಕೂಡಾ ಬರುತ್ತಾರೆ.

ಈ ಪರಿಸರದಲ್ಲಿ ಯುವಕರು ಕ್ರಿಕೆಟ್ ಆಟವಾಡುತ್ತಿರುತ್ತಾರೆ. ಹಲವು ಮನೆಗಳೂ ಕೂಡಾ ಈ ಪರಿಸರದಲ್ಲಿದೆ. ಇದಕ್ಕೆ ಹೋಗಲು ಕಚ್ಚಾ ರಸ್ತೆಯೂ ಇದೆ. ಇಲ್ಲಿಗೆ ಬರುವವರಿಗೆ ಸ್ಥಳೀಯರು ಎಚ್ಚರಿಕೆ ನೀಡುತ್ತಿದ್ದರೂ ಅಪಾಯ ತಂದುಕೊಳ್ಳುತ್ತಿದ್ದಾರೆ. ಹೊಂಡದಿAದ ನೀರು ಹೊರಗೆ ಹೋಗುವ ವ್ಯವಸ್ಥೆ ರೈಲ್ವೇ ಇಲಾಖೆ ಮಾಡಬೇಕಾಗಿದೆ. ಗುಂಡಿ ಅಪಾಯಕಾರಿಯಾಗಿದ್ದು, ಇಲ್ಲಿ ರೈಲ್ವೇ ಇಲಾಖೆ ಯಾವುದೇ ಮುನ್ನೆಚ್ಚರಿಕಾ ಫಲಕಗಳನ್ನು ಕೂಡಾ ಅಳವಡಿಸಿಲ್ಲ. ಇದಕ್ಕೆ ತಡೆಬೇಲಿಯನ್ನೂ ಹಾಕಿಲ್ಲ ಇನ್ನಾದರೂ ರೈಲ್ವೇ ಇಲಾಖೆ ಹೊಂಡ ಮುಚ್ಚಲು ಕ್ರಮ ವಹಿಸಬೇಕು. ಇದಕ್ಕೆ ಸೂಕ್ತ ತಡೆಬೇಲಿ ಅಳವಡಿಸಬೇಕು. ಮೃತಪಟ್ಟ ವರುಣ್ ಮತ್ತು ವೀಕ್ಷಿತ್ ಕುಟುಂಬಕ್ಕೆ ರೈಲ್ವೇ ಇಲಾಖೆ, ಸರಕಾರದ ವತಿಯಿಂದ ಆರ್ಥಿಕ ನೆರವು ನೀಡಿ ಅವರ ಮನೆಮಂದಿ ಬದುಕಿಗೆ ನೆರವಾಗಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.



