ತುಳುನಾಡಿನ ಜಾನಪದ ಕ್ರೀಡೆಗಳು ಇತ್ತೀಚೆಗೆ ದೇಶ ವಿದೇಶಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾಂತಾರ ಸಿನಿಮಾದ ಬಳಿಕವಂತೂ ತುಳುನಾಡಿನ ‘ಕಂಬಳ ಕ್ರೀಡೆ’ ವಿಶೇಷತೆಯನ್ನು ಪಡೆದುಕೊಂಡಿದೆ.

ಇದೀಗ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಬೆಂಗಳೂರಿನಲ್ಲಿ ಪುತ್ತೂರಿನ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ‘ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೊಡುಕರೆ ಕಂಬಳ’ ಆಯೋಜನೆಗೊಳಿಸಲು ಯೋಚನೆ ರೂಪಿಸಲಾಗಿದೆ.

ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾಗಿರುವ ಅಶೋಕ್ ರೈ ಹಾಗೂ ಬೆಂಗಳೂರಿನ ತುಳುಕೂಟ ಸಮಿತಿ 50 ನೇ ವರ್ಷವನ್ನು ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಆಯೋಜಿಸುವ ಯೋಜನೆ ಹಾಕಿಕೊಂಡಿದ್ದು, ಕಂಬಳ ಕೂಟದೊಂದಿಗೆ ವಿಶ್ವ ತುಳು ಸಮ್ಮೇಳನ ಕೂಡ ಆಯೋಜಿಸಲಿದೆ .

ಅರಮನೆ ಮೈದಾನದಲ್ಲಿ ನಡೆಸುವ ಉದ್ದೇಶದಿಂದ ಕಂಬಳಕ್ಕೆ ‘ರಾಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಜೊಡುಕರೆ ಕಂಬಳ’ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದ್ದು, ಕರೆ ನಿರ್ಮಿಸುವ ಜಾಗವನ್ನು ಅಶೋಕ್ ರೈ ಸಹಿತ ತುಳುಕೂಟದ ಪ್ರಮುಖರು ವೀಕ್ಷಣೆ ಮಾಡಿದ್ದಾರೆ.
ಮೈಸೂರಿನ ಒಡೆಯರ್ ಕುಟುಂಬದ ಜಾಗವಾದ ಅರಮನೆ ಮೈದಾನದಲ್ಲಿ ಕಂಬಳ ಮಾಡುವ ಬಗ್ಗೆ ಈಗಾಗಲೇ ಶಾಸಕರು ಮಾತಾನಾಡಿದ್ದು, ಇದಕ್ಕೆ ಮೈಸೂರು ಮಹಾರಾಣಿ ಹಾಗೂ ಯುವರಾಜರ ಅನುಮತಿ ಕೂಡ ನೀಡಿದ್ದಾರೆ. ಆದರೆ ಸರಕಾರದ ಅನುಮತಿಯನ್ನು ಪಡೆಯಲು ಬಾಕಿಯಿದೆ.

ಅವಿಭಾಜಿತ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದ್ದ ಕಂಬಳ ಕೂಟ ಇದೇ ಮೊದಲ ಬಾರಿ ರಾಜಧಾನಿಯಾದ ಬೆಂಗಳೂರಿಗೆ ಕಾಲಿಡಲಿದ್ದು, ತುಳುನಾಡಿನ ಕೋಣಗಳು ರೈಲುಗಳನ್ನೇರಿ ‘ಸಿಲಿಕಾನ್ ಸಿಟಿ’ ಯಲ್ಲಿ ತನ್ನ ಕಮಾಲ್ ಪ್ರದರ್ಶಿಸಲಿದ್ದಾರೆ.
ಹೌದು, ಕಂಬಳ ಕೂಟಕ್ಕೆ ಕೋಣಗಳನ್ನು ಸಾಗಿಸುವ ಬಗ್ಗೆ ಈಗಾಗಲೆ ಮೊದಲ ಹಂತದ ಮಾತುಕತೆ ನಡೆಯುತ್ತಿದೆ. ಕೋಣಗಳನ್ನು ಲಾರಿಯಲ್ಲಿ ಸಾಗಿಸುವುದಕ್ಕೆ ವೆಚ್ಚ ಜಾಸ್ತಿ ಆಗುತ್ತದೆ ಜೊತೆಗೆ ಕೋಣಗಳಿಗೆ ಆಯಾಸವು ಆಗಬಹುದು. ಈ ನಿಟ್ಟಿನಲ್ಲಿ ಕೋಣಗಳನ್ನು ರೈಲಿನಲ್ಲಿ ಸಾಗಿಸುವುದು ಉತ್ತಮ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.
ಸೆಮಿ ಫೈನಲ್ ಹಂತಕ್ಕೆ ಬಂದ 50 ಜೋಡಿಗಳಷ್ಟು ಕೋಣಗಳನ್ನು ಬೆಂಗಳೂರಿನ ಕೂಟದಲ್ಲಿ ಓಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಲ್ಲದೇ ಕೋಣಗಳಿಗೆ ದಕ್ಷಿಣ ಕನ್ನಡದ ನೀರಿನಲ್ಲಿ ಓಡಿ, ಆ ನೀರನ್ನೇ ಕುಡಿಯುತ್ತಿದ್ದವು.
ಆದರೆ ಬೆಂಗಳೂರಿನ ಗಡಸು ನೀರಿನಲ್ಲಿ ಕೋಣಗಳು ಜೀದಿಸಬಹುದೇ ಎನ್ನುವ ಬಗ್ಗೆ ಸಂಶಯಗಳಿದ್ದು, ಈ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಪುಣೆಯ ಟ್ಯೂಬ್ ಹಾಗೂ ಬೆಂಗಳೂರಿನ ಲ್ಯಾಬ್‌ಗೆ ಪರೀಕ್ಷೆಗೆ ನೀರನ್ನು ಕಳುಹಿಸಿದೆ.
ಮೊದಲ ಬಾರಿಗೆ ತುಳುನಾಡಿನ ಕಂಬಳದ ಕೋಣಗಳು ರೈಲನ್ನೇರಿ ರಾಜಧಾನಿಯತ್ತ ಪಯಣ ಬೆಳೆಸಲಿದ್ದು, ಇದು ತುಳುವರಿಗೆ ಸಂತಸದ ವಿಷಯವಾಗಿದೆ.



