ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಮನೆಯ ಅವರಣಗೋಡೆಗೆ ಗುದ್ದಿ ಚರಂಡಿಗೆ ವಾಲಿ ನಿಂತ ಘಟನೆ ಬಿಸಿರೋಡು ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಂಟ್ವಾಳ ಚೆಂಡ್ತಿಮಾರ್ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ.

ಚೆಂಡ್ತಿಮಾರ್ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಮನೆಯ ಕಾಂಪೌಂಡ್ ಗೆ ಗುದ್ದಿದ ಲಾರಿ ಅವರ ಮನೆಯ ಗೇಟಿಗೂ ಹಾನಿ ಮಾಡಿದೆ. ಸದ್ಯ ಮನೆಗೆ ಯಾವುದೇ ಅಪಾಯವಾಗಿಲ್ಲ.
ಮಧ್ಯ ರಾತ್ರಿ ಸುಮಾರು 1.30 ಗಂಟೆ ವೇಳೆ ದೊಡ್ಡ ಶಬ್ದವಾಗಿದ್ದು ಮನೆಯ ಯಜಮಾನ ಮೋನಪ್ಪ ಪೂಜಾರಿ ಅವರು ಹೊರಗಡೆ ಬಂದು ನೋಡಿದಾಗ ಲಾರಿ ಕಂಪೌಡ್ ಗೆ ಗುದ್ದಿ ಅಲ್ಲೆ ಪಕ್ಕಕ್ಕೆ ವಾಲಿ ನಿಂತಿತ್ತು.
ಲಾರಿ ಚಾಲಕ ಯಾವುದೇ ಅಪಾಯವಿಲ್ಲದೆ ಹೊರಕ್ಕೆ ಬಂದಿದ್ದ.

ಯಾವುದೇ ಸಾಮಾಗ್ರಿಗಳು ಇಲ್ಲದೆ ಖಾಲಿ ಲಾರಿ ಮಂಗಳೂರಿನಿಂದ ವಾಪಸು ಉಜಿರೆಗೆ ಹೋಗುವ ವೇಳೆ ನಿದ್ದೆಯ ಕಣ್ಣಿನಲ್ಲಿದ್ದ ಚಾಲಕನಿಗೆ ಲಾರಿ ನಿಯಂತ್ರಣಕ್ಕೆ ಸಿಗದೆ ಘಟನೆ ನಡೆದಿರಬಹುದು ಎಂದು ಹೇಳಲಾಗಿದೆ.
ಇದೇ ಮನೆಯ ಸಮೀಪದ ಮನೆಗೆ ಪಿಕಪ್ ವಾಹನವೊಂದು ಗುದ್ದಿ ಮನೆಗೆ ಹಾನಿಯಾಗಿದ್ದಲ್ಲದೆ ,ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಕೆಲ ತಿಂಗಳ ಹಿಂದೆ ನಡೆದಿತ್ತು.
ಈಗ ಮತ್ತೆ ಅದೇ ಭಾಗದಲ್ಲಿ ಮತ್ತೊಂದು ಘಟನೆ ನಡೆದಿದೆ ಆದರೆ ಯಾವುದೇ ಅಪಾಯವಾಗಿಲ್ಲ.



