ಮಂಗಳೂರು: ಕರ್ನಾಟಕ-ಕೇರಳ ಗಡಿ ಜಿಲ್ಲೆಯಾದ ಕಾಸರಗೋಡಿನ ಬದಿಯಡ್ಕ ಸಮೀಪ ಪಳ್ಳತ್ತಡ್ಕ ಎಂಬಲ್ಲಿ ಶಾಲಾ ಬಸ್-ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಮೃತಪಟ್ಟಿದ್ದಾರೆ.

ಶಾಲಾ ಮಕ್ಕಳನ್ನು ಬಿಟ್ಟು ಬರುತ್ತಿದ್ದ ಬಸ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿದೆ. ಘಟನೆಯ ತೀವ್ರತೆಗೆ ಆಟೋ ನಜ್ಜುಗುಜ್ಜಾಗಿದ್ದು, ಆಟೋದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ.
ಪೆರ್ಲೆ ಭಾಗದಿಂದ ಚಲಿಸುತ್ತಿದ್ದ ಮಾನ್ಯದ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ ಬಸ್ ಹಾಗೂ ಮೊಗ್ರಲ್ ಪುತ್ತೂರು ಮೂಲದ ಆಟೋ ನಡುವೆ ಅಪಘಾತ ನಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದೆ.

ತಾಯಲಂಗಡಿ ನಿವಾಸಿ ಪ್ರಸ್ತುತ ಮೊಗ್ರಾಲಿನಲ್ಲಿ ವಾಸಿಸುವ ರಿಕ್ಷಾ ಡ್ರೈವರ್ ಅಬ್ದುಲ್ ರೌಪ್ (58), ಮೊಗ್ರಾಲಿನ ಉಸ್ಮಾನ್ ಎಂಬವರ ಪತ್ನಿ ಭಿಪಾತಿಮ್ಮ (50), ಷೇಕ್ ಅಲಿ ಎಂಬವರ ಪತ್ನಿ ಭಿಪಾತಿಮ್ಮ (60), ಇಸ್ಮಾಯಿಲ್ ಅವರ ಪತ್ನಿ ಉಮ್ಮು ಅಲಿಮಾ,ಬೆಳ್ಳೂರು ಅಬ್ಬಾಸ್ ಎಂಬವರ ಪತ್ನಿ ನಫೀಸ ಸಾವನ್ನಪ್ಪಿದವರು.
ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



