ಅಣ್ಣ ತಂಗಿಯರ ಇಬ್ಬರು ಹೆಣ್ಣುಮಕ್ಕಳು ನಾಪತ್ತೆಯಾದ ಘಟನೆ ಕುಂಬಳೆಯಲ್ಲಿ ನಡೆದಿದ್ದು, ಕುಂಬಳೆ ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 15ರ ಹರೆಯದ ಹಾಗೂ 22ರ ಹರೆಯದ ಹೆಣ್ಮಕ್ಕಳು ನಿಗೂಢವಾಗಿ ನಾಪತ್ತೆಯಾದವರು.
ವರ್ಕಾಡಿ ನಿವಾಸಿ 15ರ ಹರೆಯದ ಬಾಲಕಿಯ ಹೆತ್ತವರು ಉಳ್ಳಾಲದಲ್ಲಿ ನಡೆದಿದ್ದ ವಿವಾಹಕ್ಕೆ ತೆರಳಿದ್ದರು. ಇಬ್ಬರು ಹೆಣ್ಮಕ್ಕಳ ಸಹಿತ ನಾಲ್ವರು ಮಕ್ಕಳು ಮನೆಯಲ್ಲಿ ಉಳಿದುಕೊಂಡಿದ್ದರು. ಸಂಜೆ ಮನೆಗೆ ವಾಪಸಾದಾಗ ಮಗಳು ನಾಪತ್ತೆಯಾಗಿದ್ದಳು. ಉಳಿದ ಮಕ್ಕಳಲ್ಲಿ ಪ್ರಶ್ನಿಸಿದಾಗ ಬಾಲಕಿ ಮುಟ್ಟಂಗೆ ತೆರಳಿರುವುದಾಗಿ ತಿಳಿಸಿದ್ದಾರೆ.

ಬಾಲಕಿಯ ತಂದೆ ಮುಟ್ಟಂನಲ್ಲಿರುವ ಸಹೋದರಿಯ ಮನೆಗೆ ಕರೆ ಮಾಡಿ ವಿಚಾರಿಸಿದಾಗ ತನ್ನ 22ರ ಹರೆಯದ ಯುವತಿಯೂ ನಾಪತ್ತೆಯಾಗಿದ್ದಾಳೆಂದು ತಿಳಿಸಿ ದ್ದಾರೆ. ಈ ಇಬ್ಬರು ಜತೆಯಾಗಿ ಹೋಗಿರಬಹುದೆಂದು ಶಂಕಿಸಿ ಇತರೆಡೆ ಹುಡುಕಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜೇಶ್ವರ ಮತು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಇವರಿಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ.
ಇವರ ಪತ್ತೆಗೆ ವಿವಿಧ ಸ್ಥಳಗಳಲ್ಲಿರುವ ಸಿಸಿಟಿವಿ ಕೆಮರಾಗಳ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.



