
ಉಡುಪಿ: ನೇಜಾರಿನ ತೃಪ್ತಿನಗರದಲ್ಲಿ ಭಾನುವಾರ ದುಷ್ಕರ್ಮಿಯೋರ್ವ ಒಂದೇ ಕುಟುಂಬದ ನಾಲ್ವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಆರೋಪಿ ಪತ್ತೆಗಾಗಿ ಡಿವೈಎಸ್ಪಿ ನೇತೃತ್ವದಲ್ಲಿ 5 ತಂಡ ರಚನೆ ಮಾಡಿದ್ದಾರೆ.
ಮಂಗಳೂರು, ಶಿವಮೊಗ್ಗ, ಕಾರವಾರ ಮತ್ತು ಉಡುಪಿಯಲ್ಲಿ ಎರಡು ತಂಡಗಳಿಂದ ತನಿಖೆ ನಡೆಯುತ್ತಿದೆ. ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ಇಬ್ಬರು ಶಂಕಿತ ವ್ಯಕ್ತಿಗಳನ್ನು ವಿಚಾರ ನಡೆಸಿದ್ದು, ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ: ಭಾನುವಾರ ಬೆಳಿಗ್ಗೆ ನೇಜಾರುವಿನ ತೃಪ್ತಿ ಲೇಔಟ್ ನಿವಾಸಿ ಹಸೀನಾ(42), ಅವರ ಪುತ್ರಿಯರಾದ ಅಫ್ನಾನ್(22) ಮತ್ತು ಅಯ್ನಾಝ್(20) ಮತ್ತು ಪುತ್ರ ಅಸೀಮ್(12)ನನ್ನು ದುಷ್ಕರ್ಮಿಯೋರ್ವ ಹರಿತವಾದ ಆಯುಧದಿಂದ ಇರಿದು ಕೊಲೆಗೈದಿದ್ದಾನೆ. ಈ ವೇಳೆ ಹಸೀನಾರ ಅತ್ತೆ ಹಾಜಿರಾ(70) ಎಂಬವರು ದುಷ್ಕರ್ಮಿಯಿಂದ ಇರಿತಕ್ಕೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.



