ಬಿ.ಸಿ.ರೋಡಿನ ವಿವೇಕನಗರ ರಸ್ತೆಯ ಗುಂಡಿಯನ್ನು ಅಧಿಕಾರಿಯೋರ್ವರು ಕಾಂಕ್ರೀಟ್ ಮಾಡಿಸಿದ ಅಪರೂಪದ ಘಟನೆ ನಿನ್ನೆ ರಾತ್ರಿ ನಡೆದಿದೆ. ಬಿ.ಸಿ.ರೋಡಿನ ಬಸ್ ನಿಲ್ದಾಣದ ಮುಂಭಾಗದ ಸರ್ವೀಸ್ ರಸ್ತೆಯಿಂದ ವಿವೇಕ ನಗರ ರಸ್ತೆಗೆ ಪ್ರವೇಶ ಮಾಡುವ ಭಾಗದಲ್ಲಿ ರಸ್ತೆಯನ್ನು ಉದ್ದಕ್ಕೆ ಅಗೆದು ಹಾಕಲಾಗಿದ್ದು, ಬಳಿಕ ಅದನ್ನು ಮುಚ್ಚದ ಕಾರಣದಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇಲ್ಲಿನ ಹೋಟೆಲ್ ಒಂದರ ಮಾಲಕರು, ನೀರಿನ ಪೈಪ್ ಅಳವಡಿಕೆಯ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದುಹಾಕಿ ಹೋಗಿದ್ರು. ಇದು ಪುರಸಭಾ ಸಹಿತ ಸಂಬOಧಿಸಿದ ಎಲ್ಲಾ ಇಲಾಖೆಯ ಅಧಿಕಾರಗಳ ಕಣ್ಣಿಗೆ ಬಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.

ಕನಿಷ್ಠ ಪಕ್ಷ ಅಗೆದು ಹಾಕಿದ ವ್ಯಕ್ತಿಯನ್ನು ಕರೆದು ಕಾಂಕ್ರೀಟ್ ಹಾಕಿಸುವ ಕೆಲಸ ಕೂಡ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದಿಯಾ ನಾಯಕ್ ಅವರು ಪುರಸಭೆಗೆ ಆರಂಭದಲ್ಲಿ ಮೌಖಿಕವಾಗಿ ಸಮಸ್ಯೆಯನ್ನು ಹೇಳಿಕೊಂಡಿದ್ದರು, ಬಳಿಕ ಲಿಖಿತವಾಗಿ ರಸ್ತೆಯನ್ನು ಸರಿಪಡಿಸುವಂತೆ ಮನವಿಯನ್ನು ಕೂಡ ಮಾಡಿದ್ದಾರೆ.
ಆದರೆ ಯಾವುದಕ್ಕೂ ಬೆಲೆ ಕೊಡದೆ ಮೌನವಾಗಿದ್ದ ಇಲಾಖೆಯ, ಸಹವಾಸವೇ ಬೇಡ ಎಂದು ಸ್ವತಃ ಕಾಂಕ್ರೀಟ್ ಹಾಕಿಸಿದ್ದಾರೆ. ರಾತ್ರಿ ವೇಳೆ ವಾಹನಗಳ ಓಡಾಟ ಕಡಿಮೆ ಇರುವ ಕಾರಣ ಸೋಮವಾರ ರಾತ್ರಿ ವೇಳೆ ಕಾಂಕ್ರೀಟ್ ಹಾಕಿದ್ದು, ಕಾಂಕ್ರೀಟ್ ಹಾಕಿಸಿದ ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.



