ಬಂಟ್ವಾಳ: ಮನೆಯಂಗಳಕ್ಕೆ ಪ್ರವೇಶಿಸಿದ ನಾಲ್ಕೆದು ಮಂದಿಯ ಗುಂಪು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ನಗರ ಠಾಣಾ ವ್ಯಾಪ್ತಿಯ ಬಿ ಮೂಡ ಗ್ರಾಮದ ಗಾಂದೋಡಿ ಎಂಬಲ್ಲಿ ಮುಂಜಾನೆ ನಡೆದಿದೆ.

ಈ ಬಗ್ಗೆ ಮಂಗಳೂರು ತಾಲೂಕು ಬಳ್ಳಾಲಭಾಗ್ ಶಿರ್ವ ವಿಸ್ತಾ ಅಪಾರ್ಟ್ ಮೆಂಟ್ ನಿವಾಸಿ ಎಂ ಚಂದ್ರ ಶೆಟ್ಟಿ (64) ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ತನ್ನ ಹೆಂಡತಿಗೆ ಸಂಬಂದಿಸಿದ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಂದೋಡಿ ಎಂಬಲ್ಲಿರುವ ಮನೆಗೆ ಬುಧವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಬಿ ಮೂಡ ನಿವಾಸಿ, ಆರೋಪಿ ಸುಮಿತ್ ಆಳ್ವ (45) ಎಂಬಾತ ತನ್ನ 4 ಮಂದಿ ಸಹಚರರ ಜೊತೆ ಸೇರಿ ಮಹೇಂದ್ರ ಎಕ್ಸ್ ಯು ವಿ 500 ವಾಹನದಲ್ಲಿ ಬಂದು, ಮನೆಯ ಎದುರುಗಡೆ ಅಳವಡಿಸಿದ ಕಬ್ಬಿಣ ಗೇಟ್ ಮುರಿದು ಮನೆಯಂಗಳಕ್ಕೆ ಬಂದು ಮನೆಯ ಮುಂಭಾಗಕ್ಕೆ ಪೆಟ್ರೋಲ್ ಎರಚಿ ಬೆಂಕಿ ಹೆಚ್ಚಿರುತ್ತಾರೆ. ಪರಿಣಾಮ ಮನೆಯ ಮುಂಬಾಗಿಲು ಸುಟ್ಟು ಹೋಗಿದ್ದು, ಹೊರಾಂಗಣದಲ್ಲಿದ್ದ ಕುರ್ಚಿ ಸಂಪೂರ್ಣ ಸುಟ್ಟು ಹೋಗಿರುತ್ತದೆ.
ಘಟನೆಯ ಬಗ್ಗೆ ಇದೇ ಮನೆಯಲ್ಲಿ ಬಾಡಿಗೆ ವಾಸವಿರುವ ಪ್ರದೀಪ ಹಾಗೂ ಮನ್ಸೂರ್ ಎಂಬವರು ಮನೆಯ ಒಳಗಿನಿಂದ ಗಮನಿಸಿ, ಬೊಬ್ಬೆ ಹೊಡೆದು, ಚಂದ್ರ ಶೆಟ್ಟಿ ಅವರಿಗೆ ಕರೆ ಮಾಡಿ ತಿಳಿಸಿದಂತೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮ 143/2023 147, 448, 427, 436, 511 307 0 143, 3 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



