ಉಡುಪಿ:ಸಮಾಜ ಸೇವಕ, ಹಿರಿಯ ರಂಗ ಕಲಾವಿದ ಕೆ.ಲೀಲಾಧರ ಶೆಟ್ಟಿ ದಂಪತಿಯ ಅಕಾಲಿಕ ಮರಣದಿಂದ ಕಾಪು ತಾಲೂಕಿನ ಜನತೆ ಶೋಕ ಸಾಗರದಲ್ಲಿ ಮುಳುಗಿದೆ.


ಸಾವಿನ ಸುದ್ದಿ ತಿಳಿದು ನೂರಾರು ಮಂದಿ ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು ಮನೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ನಿನ್ನೆ ಸಂಜೆ ಕಾಪು ಪೊಲಿಪು ಜಾಮಿಯಾ ಮಸೀದಿ ಜಂಕ್ಷನ್‌ನಿಂದ ಕರಂದಾಡಿ ಶಾಲೆಯವರೆಗೆ ದಂಪತಿಯ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಯಲ್ಲಿ ತರಲಾಯಿತು. ಬಳಿಕ ಕರಂದಾಡಿ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಸೇರಿದಂತೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತುತಿ ಧಾರ್ಮಿಕ ಕ್ಷೇತ್ರದ ನೂರಾರು ಮಂದಿ ಯಾತ್ರೆಯುದ್ದಕ್ಕೂ ಪಾಲ್ಗೊಂಡು ಗೌರವ ಸಲ್ಲಿಸಿದ್ದರು.ಮೃತರ ಗೌರವಾರ್ಥ ಬೆಳಗ್ಗೆಯಿಂದ ಕಾಪು ಪೇಟೆ, ಕೊಂಬಗುಡ್ಡೆ, ಮಜೂರು ಪರಿಸರದಲ್ಲಿನ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಗೌರವ ಸೂಚಿಸಲಾಯಿತು.

ಕೆ.ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಕೌಟುಂಬಿಕ ಕಾರಣಕ್ಕಾಗಿ ಮಂಗಳವಾರ ಮಧ್ಯ ರಾತ್ರಿ ವೇಳೆ ಮಜೂರು ಗ್ರಾಮದ ಕರಂದಾಡಿ ಎಂಬಲ್ಲಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಲೀಲಾಧರ ಶೆಟ್ಟಿ ದಂಪತಿ ಮಕ್ಕಳಿಲ್ಲದ ಕಾರಣಕ್ಕಾಗಿ ಸುಮಾರು 16 ವರ್ಷದ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡಿದ್ದರು. ಆಕೆ ಡಿ.12ರಂದು ರಾತ್ರಿ ಮನೆ ಬಿಟ್ಟು ಹೋಗಿದ್ದು, ಇದೇ ವಿಚಾರದಲ್ಲಿ ಮರ್ಯಾದೆಗೆ ಅಂಜಿ ಮನನೊಂದ ದಂಪತಿ, ಮರಣ ಪತ್ರ ಬರೆದಿಟ್ಟು ರಾತ್ರಿ 11:20 ಗಂಟೆಯಿಂದ ಮಧ್ಯರಾತ್ರಿ 12.30ರ ಮಧ್ಯಾವಧಿಯಲ್ಲಿ ಮನೆಯ ಮಲಗುವ ಕೋಣೆಯಲ್ಲಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



