ಬೀಡಿ ಕಾರ್ಮಿಕರ ತುಟ್ಟಿಭತ್ಯೆ, ಕನಿಷ್ಠ ಕೂಲಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಕಳ ಮಿನಿ ವಿಧಾನ ಸೌಧದ ಮುಂದೆ ಧರಣಿ ನಡೆಸಲಾಯಿತು.

ಪ್ರತಿ 1000 ಬೀಡಿಗೆ ಹೊಸ ವೇತನ 400ರೂ.ನಂತೆ ನಿಗದಿಗೊಳಿಸಿ, ಸರಕಾರ ಆದೇಶ ಮಾಡಬೇಕು. ಬಡ ಬೀಡಿ ಕಾರ್ಮಿಕರಿಗೆ ಅನ್ಯಾಯ ಮಾಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ಗ್ರಾಚ್ಯುವಿಟಿ ಕಡ್ಡಾಯ ಪಾವತಿಸು ವಂತೆ ಮಾಡಬೇಕು. ವಾರ ಪೂರ್ತಿ ಕೆಲಸ ಅಥವಾ ಕೆಲಸ ಇಲ್ಲದ ದಿನ ವೇತನ ನೀಡಲು ಬೀಡಿ ಮಾಲೀಕರಿಗೆ ಸೂಚಿಸಬೇಕು ಎಂದು ಬೀಡಿಕಾರ್ಮಿಕರ ನೈಜ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿ, ಪರಿಹಾರ ಕಾಣಬೇಕು. ಕಾನೂನು ಬಾಹಿರ ಬೀಡಿ ಉತ್ಪಾದನೆಯನ್ನು ನಿಲ್ಲಿಸಿ, ಕಾರ್ಮಿಕ ಕಾನೂನುಗಳ ಕಠಣ ಜಾರಿಗೆ ಕ್ರಮ ವಹಿಸಬೇಕು. ಬೀಡಿ ಕಾರ್ಮಿಕರ ಆರೋಗ್ಯದ ಬಗ್ಗೆ ಸರಕಾರ ಜವಾಬ್ದಾರಿ ವಹಿಸಬೇಕು. ಬೀಡಿ ಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ ಒದಗಿಸಬೇಕು. ತಿಂಗಳಿಗೆ 6000ರೂ. ಪಿಂಚಣಿ ನೀಡ ಬೇಕು. ಬೀಡಿಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.ಬಳಿಕ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಬೀಡಿ ಫೆಡರೇಶನ್‌ನ ಉಪಾಧ್ಯಕ್ಷ ಬಿ.ಎಂ.ಭಟ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಬೀಡಿ ಫೆಡರೇಶನ್‌ನ ಅಧ್ಯಕ್ಷ ಮಹಾಬಲ ವಡೆಯರಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಮುಖಂಡರಾದ ಬಲ್ಕೀಸ್, ನಳಿನಿ, ಕಾರ್ಕಳ ಬೀಡಿ ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಕೋಶಾಧಿಕಾರಿ ಸುಮತಿ ಮೊದಲಾದವರು ಉಪಸ್ಥಿತರಿದ್ದರು.



