ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕೊಳಚೆ ನೀರು ನದಿಯನ್ನು ಸೇರುತ್ತಿರುವುದು ಹಳೆ ಕಥೆಯಾಗಿದ್ದು, ಇದೀಗ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದೆ. ಬಂಟ್ವಾಳ ಪೇಟೆ ಹಾಗೂ ಬಿ.ಸಿ.ರೋಡನ್ನು ಸಂಪರ್ಕಿಸುವ ಮುಖ್ಯರಸ್ತೆಯ ಬಸ್ತಿಪಡ್ಪು ಬಳಿ ಕೊಳಚೆ ನೀರಿ ತೆರೆದ ಚರಂಡಿಯಲ್ಲಿ ಹರಿಯುತ್ತಿದ್ದು, ಒಂದು ಕಡೆ ರಸ್ತೆಯನ್ನೂ ಸೇರಿ ಹರಿಯುತ್ತಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ ಇನ್ನೂ ಅನುಷ್ಠಾನವಾಗದೇ ಇದ್ದು, ಕನಿಷ್ಠ ಪಕ್ಷ ಕೊಳಚೆ ನೀರು ತೆರೆದ ಚರಂಡಿಗಳಲ್ಲಿ ಹರಿಯದಂತೆ ಪುರಸಭೆ ಕ್ರಮಕೈಗೊಳ್ಳಬೇಕಿತ್ತು. ಆದರೆ ಪುರಸಭೆಯ ಮುಖ್ಯಾಧಿಕಾರಿಗಳು ಸೇರಿದಂತೆ ಬಹುತೇಕ ಎಲ್ಲಾ ಅಧಿಕಾರಿ/ಸಿಬಂದಿ ನಿತ್ಯವೂ ಓಡಾಡುವ ರಸ್ತೆಯಲ್ಲಿ ಕೊಳಚೆ ನೀರು ಹರಿಯುವುದು ಅವರ ಗಮನಕ್ಕೆ ಬಾರದೇ ಇದ್ದುದು ವಿಪರ್ಯಾಸವೇ ಸರಿ.
ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಡಳಿತ ಮುಗಿದು ಹೊಸ ಮೀಸಲಾತಿ ಬಾರದೇ ಇರುವುದರಿಂದ ಸದ್ಯ ಅಧಿಕಾರಿಗಳದ್ದೇ ಕಾರುಬಾರು ಇದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವೇ ಇಲ್ಲದಾಗಿದೆ. ಅವರ ಬಳಿ ತಮ್ಮ ಕರ್ತವ್ಯ ಪ್ರಜ್ಞೆ, ಸಾಮಾಜಿಕ ಕಳಕಳಿ ಇರುತ್ತಿದ್ದ ಈ ರೀತಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುವುದಕ್ಕೆ ಬಿಡುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಿಸುತ್ತಿದ್ದಾರೆ.
ಬಂಟ್ವಾಳ ಕೆಳಗಿನ ಪೇಟೆ ಭಾಗದಿಂದ ಈ ಕೊಳಚೆ ನೀರು ಆಗಮಿಸುತ್ತಿದ್ದು, ಅಗ್ನಿಶಾಮಕ ಠಾಣೆಯ ಮುಂದೆಯೂ ಶೇಖರಣೆಗೊಂಡಿದೆ. ಇಲ್ಲಿ ಅರ್ಧದವರೆಗೆ ಕಾಂಕ್ರೀಟ್ ಚರಂಡಿ ನಿರ್ಮಿಸಿ ಸ್ಲ್ಯಾಬ್ ಅಳವಡಿಸಲಾಗಿದ್ದು, ಉಳಿದಂತೆ ಹಾಗೇ ಬಿಡಲಾಗಿದೆ. ಒಂದಷ್ಟು ದೂರದಲ್ಲಿ ಹರಿಯುವುದಕ್ಕೆ ಚರಂಡಿಯೂ ಇಲ್ಲದೆ ಕೊಳಚೆ ನೀರು ಅಲ್ಲೇ ಶೇಖರಣೆಗೊಳ್ಳುತ್ತಿದೆ.
ಬಂಟ್ವಾಳ ಪುರಸಭೆಗೆ ಕೊಳಚೆ ನೀರು ಹರಿಯುವುದಕ್ಕೆ ಚರಂಡಿ ನಿರ್ಮಿಸಿ ಸ್ಲ್ಯಾಬ್ ಅಳವಡಿಸುವುದು ಸಾಧ್ಯವಾಗದೇ ಇದ್ದರೆ, ಈ ರೀತಿ ಕೊಳಚೆ ನೀರನ್ನು ರಸ್ತೆಗೆ ಬಿಡುವುದಕ್ಕೂ ನಿಯಂತ್ರಣ ಹಾಕಿದರೂ ಈ ಸಮಸ್ಯೆ ದೂರವಾಗುತ್ತದೆ. ಆದರೆ ಈ ಎರಡೂ ಕೆಲಸವನ್ನೂ ಪುರಸಭೆ ಮಾಡದೇ ಇರುವುದರಿಂದ ಕೊಳಚೆ ನೀರು ರಸ್ತೆ ಸೇರುವಂತಾಗಿದೆ.



