ಪುತ್ತೂರು : ಪುತ್ತೂರು ನಗರಸಭೆ ಚುನಾವಣೆಯಲ್ಲಿ ಕಳೆದ ಬಾರಿ 31 ವಾರ್ಡ್ಗಳಲ್ಲಿ 25 ಸ್ಥಾನ ಪಡೆದು ಕೊಂಡಿದ್ದೆವು. ಈ ಭಾರಿ ಎರಡು ವಾರ್ಡ್ಗಳ ಉಪಚುನಾವಣೆಯಲ್ಲಿ 1ನೇ ವಾರ್ಡ್ನ್ನು ಉಳಿಸಿಕೊಂಡು 11ನೇ ವಾರ್ಡ್ನಲ್ಲೂ ಜಯಗಳಿಸಲಿದ್ದೇವೆ. ಹಾಗಾಗಿ ನಗರಸಭೆ 26 ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಅಭ್ಯರ್ಥಿಗಳಿಬ್ಬರನ್ನು ಘೋಷಣೆ ಮಾಡುವ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ನಗರಸಭೆ 31 ಸದಸ್ಯರುಗಳ ಪೈಕಿ ಕಳೆದ ಭಾರಿ ಚುನಾವಣೆಯಲ್ಲಿ ಬಿಜೆಪಿ 25 ಸದಸ್ಯರು ವಿಜೇತರಾಗಿದ್ದು, 1ನೇ ವಾರ್ಡ್ನಲ್ಲಿ ನಮ್ಮದೇ ಅಭ್ಯರ್ಥಿ ಶಿವರಾಮ ಸಪಲ್ಯ ಅವರು ವಿಜೇತರಾಗಿದ್ದರು. ವಾರ್ಡ್ 11ರಲ್ಲಿ ಕಾಂಗ್ರೆಸ್‌ನ ಶಕ್ತಿ ಸಿನ್ಹ ಅವರು ವಿಜೇತರಾಗಿದ್ದರು. ಅವರಿಬ್ಬರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಉಪಚುನಾವಣೆ ಸಂದರ್ಭದಲ್ಲಿ ವಾರ್ಡ್ ನಂ 1ಕ್ಕೆ ಶಿವರಾಮ ಸಪಲ್ಯ ಅವರ ಅತ್ತಿಗೆಯಾಗಿರುವ ಸುನಿತಾ ಅವರನ್ನು ಅಭ್ಯರ್ಥಿಯನ್ನಾಗಿ ಮತ್ತು ವಾರ್ಡ್ ಸಂಖ್ಯೆ 11ಕ್ಕೆ ಮಾಜಿ ಪುರಸಭೆ ಸದಸ್ಯರಾಗಿದ್ದು, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿರುವ ರಮೇಶ್ ರೈ ಅವರನ್ನು ಕಣಕ್ಕೆ ಇಳಿಸಲಿದ್ದೇವೆ. ಹಾಗಾಗಿ 1ನೇ ವಾರ್ಡ್ನ್ ಉಳಿಸಿಕೊಂಡು 11ನೇ ವಾರ್ಡ್ನಲ್ಲೂ ಜಯಗಳಿಸಲಿದ್ದೇವೆ. ರಾಷ್ಟ್ರದಲ್ಲಿ ಮೊನ್ನೆ ನಡೆದ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳನ್ನು ಮೀರಿ ಬಿಜೆಪಿ ಗೆಲುವು ಸಾಧಿಸಿದೆ. ಇಂತಹ ಸಂದರ್ಭದಲ್ಲಿ ಪುತ್ತೂರು ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದ ಅವರು ಡಿ. 15ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಹಿಂದೆ ಪುತ್ತೂರು ನಗರಸಭೆ ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮ ನಡೆಸಿದೆ. ಉತ್ತಮ ರಸ್ತೆಗಳ ನಿರ್ಮಾಣ, ಸ್ಮಾರ್ಟ್ ಬಸ್ ಪ್ರಯಾಣಿಕರ ತಂಗುದಾಣ, ಸ್ವಚ್ಛತೆಯ ವಿಚಾರದಲ್ಲಿ 31ನೇ ಸ್ಥಾನದಿಂದ ರಾಜ್ಯದಲ್ಲಿ 6ನೇ ಸ್ಥಾನಕ್ಕೆ ಬರಬೇಕಾದರೆ ಪುತ್ತೂರಿನಲ್ಲಿ ಬಿಜೆಪಿ ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದೆ. ಇದರೊಂದಿಗೆ ಕಳೆದ ಬಾರಿಯ ಶಾಸಕರು ನಗರೋತ್ಥಾನದ ಮೂಲಕ ರೂ. 31 ಕೋಟಿ ಅನುದಾನ ನೀಡುವ ಮೂಲಕ ಉತ್ತಮ ಅಭಿವೃದ್ಧಿ ಕಾರ್ಯ ನಡೆಸಿದ್ಧಾರೆ. ಪುತ್ತೂರಿನ ಜನರಿಗೆ ನೀರಿನ ಸಮಸ್ಯೆ ಬರಬಾರದು ಎಂಬ ದೃಷ್ಟಿಯಿಂದ ರೂ. 113 ಕೋಟಿ ಜಲಸಿರಿ ಯೋಜನೆ ಪ್ರಗತಿಯಲ್ಲಿದೆ. ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಿದ ಇತಿಹಾಸ ಬಿಜೆಪಿ ಆಡಳಿತದಲ್ಲಿದ್ದ ನಗರಸಭೆಯಿಲ್ಲಿತ್ತು ಎಂದು ಸುದರ್ಶನ್ ಮೂಡಬಿದ್ರೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಜಿಲ್ಲಾ ಕಾರ್ಯದರ್ಸಿ ರಾಮದಾಸ್ ಬಂಟ್ವಾಳ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ.ನಾರಾಯಣ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.



