ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾನೆ. ವಿಷಪ್ರಾಶಾನದ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಇನ್ನೂ ದೃಢೀಕರಿಸಲಾಗಿಲ್ಲ ಎಂದು ವರದಿಯಾಗಿದೆ.

ಆಸ್ಪತ್ರೆಗೆ ದಾಖಲಾಗಿ ಇಂದಿಗೆ ಎರಡು ದಿನಗಳಾಗಿದ್ದು, ಮಹಡಿಯೊಂದರಲ್ಲಿ ಇದ್ದ ರೋಗಿಗಳನ್ನು ಬೇರೆಡೆಗೆ ಶಿಫ್ಟ್ ಮಾಡಿ ಈನಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ. ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಮಹಡಿಗೆ ಪ್ರವೇಶ ನೀಡಲಾಗುತ್ತಿದೆ.
ಮುಂಬೈ ಪೊಲೀಸರು ಭೂಗತ ಪಾತಕಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಜನವರಿಯಲ್ಲಿ, ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಭೂಗತ ಲೋಕದ ಡಾನ್ ಎರಡನೇ ಬಾರಿಗೆ ಮದುವೆಯಾದ ನಂತರ ಕರಾಚಿಯಲ್ಲಿ ಉಳಿದುಕೊಂಡಿದ್ದಾನೆ ಎಂದು ತಿಳಿಸಿದ್ದರು.
ಮುಂಬೈನಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 250 ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನಪ್ಪಿದ್ದರು. 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಭೀಕರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಆಗಿದ್ದಾನೆ.
ಭಾರತ ಮತ್ತು ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ದಾವೂದ್ ಇಬ್ರಾಹಿಂ ತಲೆಗೆ ಎನ್‌ಐಎ 25 ಲಕ್ಷ ಬಹುಮಾನವನ್ನೂ ಘೋಷಿಸಿದೆ. ಭಾರತಕ್ಕೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಅಗ್ರಸ್ಥಾನದಲ್ಲಿದ್ದಾನೆ.



