ಉಡುಪಿ: ಇತ್ತೀಚೆಗೆ ಅಗಲಿದ ಸಮಾಜರತ್ನ ದಿ. ಕೆ. ಲೀಲಾಧರ ಶೆಟ್ಟಿ ಮತ್ತು ದಿ| ವಸುಂಧರಾ ಶೆಟ್ಟಿ ಅವರಿಗೆ ಸಾರ್ವಜನಿಕ ನುಡಿನಮನ ಸಮರ್ಪಣೆ ಸಹಿತ ಶ್ರದ್ಧಾಂಜಲಿ ಸಭೆಯು ಸೋಮವಾರ ಸಂಜೆ ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ ಆವರಣದಲ್ಲಿ ನಡೆಯಿತು.
ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದವ್ಯಾಸ ಐತಾಳ್ ನುಡಿನಮನ ಸಲ್ಲಿಸಿ ಮಾತನಾಡಿ, ಮಗುವನ್ನೂ ಪ್ರೀತಿಯಿಂದ ಕರೆದು ಗೌರವದಿಂದ ಮಾತನಾಡಿಸುತ್ತಿದ್ದ ಲೀಲಾಧರ ಶೆಟ್ಟಿ ಸರ್ವ ಜಾತಿ ಮತ ಧರ್ಮ ಪಂಥದವರಿಗೆ ಬೇಕಾದ ವ್ಯಕ್ತಿಯಾಗಿದ್ದರು. ಅವರ ಅಗಲುವಿಕೆಯನ್ನು ಅರಗಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದ್ದು ನಾವೆಲ್ಲರೂ ಜತೆ ಸೇರಿ ಅವರಿಗೆ ವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮಾನವ ಜನ್ಮ ದೈವಚಿತ್ತದ ಕೊಡುಗೆಯಾಗಿದ್ದು ಇಲ್ಲಿ ಬದುಕಿದಷ್ಟು ದಿನ ಉತ್ತಮರಾಗಿ ಬದುಕಿ, ಜನರಿಗಾಗಿ ತಮ್ಮ ಜೀವನವನ್ನು ತೇಯ್ದ ಲೀಲಣ್ಣ ಇಚ್ಚಾಮರಣಿಯಾಗಿ ನಮ್ಮನ್ನು ಬಿಟ್ಟು ಅಗಲಿರುವುದು ಅರಗಿಸಿಕೊಳ್ಳಲಾಗದ ಸತ್ಯ. ನೋವಿನ ವಿಚಾರವಾದರೂ ನಾವು ಅದನ್ನು ಸ್ವೀಕರಿಸಲೇಬೇಕು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರು ಕಂಡ ಕನಸುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳೋಣ ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಸೇವಾ ಕಾರ್ಯಗಳನ್ನು ಸಮಾಜ ಸ್ವೀಕರಿಸಿತ್ತು. ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ಕೈಯ್ಯಾಡಿಸಿದ್ದರು. ಸಮಾಜದ ಜತೆಗಿದ್ದು ಸಮಾಜಕ್ಕಾಗಿ ಬದುಕಿದ ವ್ಯಕ್ತಿತ್ವ ಅವರದ್ದಾಗಿತ್ತು. ಅವರನ್ನು ಮತ್ತು ಅವರು ಮಾಡಿದ ಸೇವಾ ಕಾರ್ಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಸಮಾಜಕ್ಕಾಗಿ ಬದುಕಿದವರು ಲೀಲಣ್ಣ. ಹಲವರ ಬಾಳು ಬೆಳಗಿಸಿದ್ದ ಅವರ ಕನಸನ್ನು ನನಸಾಗಿಸಲು ನಾವೆಲ್ಲರೂ ಒಂದಾಗೋಣ ಎಂದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ಮಹಾಜನ ಜೂನಿಯರ್ ಚೇಂಬರ್, ಧರಣಿ ಸಮಾಜ ಸೇವಾ ಸಂಘ, ರಂಗತರಂಗ ಕಲಾವಿದರು ಹೀಗೆ ಹತ್ತಾರು ಸಂಸ್ಥೆಗಳನ್ನು ಸ್ಥಾಪಿಸಿ, ಅದರ ಮೂಲಕವಾಗಿ ಲಕ್ಷಾಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು. ಸಮಾಜದಲ್ಲಿ ನೊಂದವರ ಪಾಲಿನ ಭಾಗ್ಯದಾತರಾಗಿದ್ದರು ಎಂದರು.
ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ ಮಾತನಾಡಿ, ಅವರ ಅಗಲುವಿಕೆ ಕೇವಲ ಊರಿಗೆ ಮಾತ್ರವಲ್ಲ, ನಾಡಿಗೇ ದೊಡ್ಡ ನಷ್ಟವನ್ನುಂಟು ಮಾಡಿದೆ. ಸಂಘರ್ಷಮಯ ವಾತಾವರಣವನ್ನು ಶಾಂತಿಯ ಹೂದೋಟವನ್ನಾಗಿ ಪರಿವರ್ತಿಸುವಲ್ಲಿ ಲೀಲಣ್ಣನವರ ಕೊಡುಗೆ ಅಪಾರವಾಗಿದೆ ಎಂದರು.
ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಽಕಾರಿ ಅಲ್ಭನ್ ರೋಡ್ರಿಗಸ್ ಮಾತನಾಡಿ, ಅನಾಥರಾದವರ ಬದುಕಿಗೆ ಲೀಲಾಧರ ಶೆಟ್ಟಿ ಬೆಳಕಾಗಿದ್ದರು. ಅವರು ತಮ್ಮ ಜೀವನದಲ್ಲಿ ಹೆಸರಿಗಾಗಿ ಏನೂ ಮಾಡಿಲ್ಲ, ಅವರು ಮಾಡಿದ ಕೆಲಸಗಳು ಅವರಿಗೆ ಹೆಸರನ್ನು ತಂದುಕೊಟ್ಟವು. ಅವರ ಬದುಕು ಎಲ್ಲರಿಗೂ ಮಾರ್ಗದರ್ಶನ ನೀಡುವಂತಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ತಾನು ಮರ್ಯಾದಸ್ಥನಾಗಿ ಬದುಕಿ, ಸಮಾಜಕ್ಕೂ ಮರ್ಯಾದೆ ತಂದಿತ್ತ ಶ್ರೇಷ್ಠ ವ್ಯಕ್ತಿ. ಈಗ ಅವರಿಲ್ಲ, ಅದರೆ ಅವರ ವ್ಯಕ್ತಿತ್ವ ಮಾತ್ರ ಸದಾ ಪ್ರೇರಣಾದಾಯಿತ್ವವಾಗಿದೆ. ಅವರು ಉಳಿಸಿ ಹೋದ ಕೆಲಸಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಲೀಲಾಧರ ಶೆಟ್ಟಿ ಅವರ ಸಹೋದರಿಯರಾದ ನಿರ್ಮಲಾ ವಿಠಲ ಶೆಟ್ಟಿ, ಗಂಗಾ ಭುಜಂಗ ಶೆಟ್ಟಿ, ವಿಠಲ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಕುಟುಂಬಸ್ಥರು, ಸಂಘಟಕರು, ಸಾವಿರಾರು ಮಂದಿ ಅಭಿಮಾನಿಗಳು, ಹಿತೈಷಿಗಳು, ಬಂಧು ಮಿತ್ರರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕರಂದಾಡಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು.
ಮಾಧ್ಯಮ ಲೋಕದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಿ 2025 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮಾಧ್ಯಮ ಆಡಳಿತ…
ಮಾಧ್ಯಮ ಲೋಕದಲ್ಲಿ ಸುದೀರ್ಘ ದುಡಿಮೆ ಮತ್ತು ತನ್ನ ಕಲಾತ್ಮಕ ಕ್ಯಾಮರಾ ಕೌಶಲ್ಯದಿಂದ ಜನಮನ ಸೆಳೆದಿದ್ದ ನಾಗರಾಜ್ ಇಂದು ನಿಧನರಾಗಿದ್ದಾರೆ. ಆರ್ಥಿಕ…
ಆಂಬ್ಯುಲೆನ್ಸ್ ವಾಹನವೊಂದಕ್ಕೆ ಸೈಡ್ ಬಿಡದೆ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸ್ಕೂಟರ್ ಸವಾರನೋರ್ವನನ್ನು ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬೆಟ್ಟಂಪಾಡಿ ನಿವಾಸಿ…
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಝಕರಿಯಾ ಜೋಕಟ್ಟೆ ಅವರಿಗೆ ಹೊರನಾಡ ಕನ್ನಡಿಗ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ…
ಪಾಣೆಮಂಗಳೂರು ಹಳೆ ಸೇತುವೆ ಬಳಿ ನಾಪತ್ತೆಯಾದ ಆಟೋ ಚಾಲಕನ ಶವ ಪತ್ತೆಯಾಗಿದೆ. ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಇಲೆಕ್ಟಿಕ್ ಆಟೋ…
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹಲವಾರು ಮಂದಿಯಿಂದ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಂಪತಿಯನ್ನು ಕಾವೂರು…