ಉಡುಪಿ:ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.

ಭಾನುವಾರ ರಾತ್ರಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದೆ. ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಅಧಿಕೃತ ಚರ್ಚು ಮಿಲಾಗ್ರಿಸ್ ಕ್ಯಾಥೆಡ್ರಲ್ ಕಲ್ಯಾಣಪುರದಲ್ಲಿ ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶವನ್ನು ನೀಡಿದ್ದಾರೆ.

ನಮ್ಮೆಲ್ಲರನ್ನು ಪ್ರೀತಿಸುವುದಕ್ಕಾಗಿ ಭುವಿಗೆ ಆಗಮಿಸಿದ ಯೇಸು ಸ್ವಾಮಿ ದನದ ಕೊಟ್ಟಿಗೆಯಾದ ಗೋದಲಿಯಲ್ಲಿ ಜನಿಸಿ ತನ್ನ ಸರಳತೆ ಮೆರೆದರು. ಪ್ರೀತಿ ಪಡೆಯುವುದರಲ್ಲಿಇರುವ ಸಂತೋಷಕ್ಕಿoತ ಇತರರಿಗೆ ಸೇವೆಯ ಮೂಲಕ ನೀಡುವುದರಲ್ಲಿ ಹೆಚ್ಚಿನ ಸಮಾಧಾನ ಇರುತ್ತದೆ. ಪರಸ್ಪರ ದ್ವೇಷಿಸುವುದಕ್ಕಿಂತ ಯೇಸುವಿನಂತೆ ಇತರರನ್ನು ಪ್ರೀತಿಸುವ ಕೆಲಸ ಮಾಡಬೇಕಾಗಿದೆ. ಕ್ರಿಸ್ತ ಜಯಂತಿ ಶಾಂತಿಯನ್ನು ಹಂಚುವ ಹಬ್ಬವಾಗಿದ್ದು ಜಗತ್ತಿನೆಲ್ಲೆಡೆ ಸದಾ ಶಾಂತಿ ನೆಲೆಸುವಂತೆ ಪ್ರಾರ್ಥಿಸಬೇಕು ಎಂದು ಧರ್ಮಾಧ್ಯಕ್ಷರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಇನ್ನು ಬಲಿಪೂಜೆಗೂ ಮುನ್ನ ಯೇಸು ಸ್ವಾಮಿಯ ಜನನದ ವೃತ್ತಾಂತವನ್ನು ನಟನೆ ಮತ್ತು ನೃತ್ಯರೂಪಕದ ಮೂಲಕ ಚರ್ಚಿನ ಮಕ್ಕಳು ಪ್ರದರ್ಶಿಸಿದ್ದಾರೆ. ಇನ್ನು ಈ ಸಂದರ್ಭ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ರೆಕ್ಟರ್ ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ಜೋಯ್ ಅಂದ್ರಾದೆ, ಕಟಪಾಡಿ ಹೋಲಿ ಕ್ರಾಸ್ ಸಭೆಯ ರೊನ್ಸನ್ ಡಿ ಸೋಜಾ ಉಪಸ್ಥಿತರಿದ್ದರು.



