ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್(57) ಹಠಾತ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಅವರಿಗೆ 57 ವರ್ಷ ವಯಸ್ಸಾಗಿತ್ತು.

‘ಪ್ರೇಮಲೋಕ’ ‘ಮಾಸ್ಟರ್ ಪೀಸ್’ ಸೇರಿ ನೂರಾರು ಸಿನಿಮಾಗಳಿಗೆ ಅವರು ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಜಾಲಿ ಬಾಸ್ಟಿನ್ ಪಾತ್ರರಾಗಿದ್ದರು.

1966ರಲ್ಲಿ ಜನಿಸಿದ ಜಾಲಿ ಬಾಸ್ಟಿನ್ ಅವರು ಮೂಲತಃ ಬೈಕ್ ಮೆಕಾನಿಕ್ ಆಗಿದ್ದವರು. ಆರಂಭದಲ್ಲಿ ಬೈಕ್ ಚೇಸಿಂಗ್ ದೃಶ್ಯಗಳಲ್ಲಿ ಜಾಲಿ ಬಾಸ್ಟಿನ್ ಅವರು ಹೀರೋಗಳಿಗೆ ಡ್ಯೂಪ್ ಆಗಿ ಕೆಲಸ ಮಾಡುತ್ತಿದ್ದರು. ಫೈಟರ್ ಆಗಿದ್ದ ಅವರು ಆನಂತರ ಸಾಹಸ ನಿರ್ದೇಶಕರಾದರು. ಜಾಲಿ ಬಾಸ್ಟಿನ್ ಅವರ ಪ್ರತಿಭೆ ಗುರುತಿಸಿ, ಹೆಚ್ಚು ಅವಕಾಶ ನೀಡಿದ್ದು ನಟ/ ನಿರ್ದೇಶಕ ರವಿಚಂದ್ರನ್.

ಹಲವು ಬಾರಿ ಸ್ಟಂಟ್ ಮಾಡುವಾಗ ಜಾಲಿ ಬಾಸ್ಟಿನ್ ಅವರು ಪೆಟ್ಟು ಮಾಡಿಕೊಂಡಿದ್ದರು. ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು. ಆಗ ಅವರಿಗೆ 17 ವರ್ಷ ವಯಸ್ಸಾಗಿತ್ತು. ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.



