ಉಡುಪಿ: ಅಯೋಧ್ಯ ಶ್ರೀರಾಮ ಮಂದಿರದ ಚಳುವಳಿಯಲ್ಲಿ ಭಾಗವಹಿಸಿದ್ದ ಎಂಬ ಒಂದೇ ಕಾರಣಕ್ಕೆ 31 ವರ್ಷಗಳ ಬಳಿಕ ಒಬ್ಬ ಕಾರ್ಮಿಕನನ್ನು ರಾಜ್ಯ ಸರ್ಕಾರ ಬಂಧಿಸಿದ್ದು, ಇದು ಖಂಡನೀಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, 31 ವರ್ಷಗಳ ಹಿಂದಿನ ಕೇಸ್ ನಲ್ಲಿ ಒಬ್ಬ ವೃದ್ಧನನ್ನು ನೀವು ಬಂಧಿಸಿದ್ದೀರಿ. ಸಿದ್ದರಾಮಯ್ಯನವರೇ, ಅವರಿಗೆ ಈಗ ನಿಮ್ಮ ತಂದೆಯ ಪ್ರಾಯ ಆಗಿರಬಹುದು. ನಿಮ್ಮ ಸರಕಾರದ ಮಾನಸಿಕತೆ ಏನು ಎಂಬುದು ಇದರಿಂದ ಗೊತ್ತಾಗುತ್ತದೆ. ಇಡೀ ದೇಶವೇ ರಾಮಮಂದಿರ ನಿರ್ಮಾಣಗೊಂಡ ಖುಷಿಯಲ್ಲಿದ್ದರೆ ನೀವು ರಾಮಮಂದಿರ ಚಳುವಳಿಯಲ್ಲಿ ಭಾಗವಹಿಸಿದ್ದ ಎಂಬ ಒಂದೇ ಕಾರಣಕ್ಕೆ ಆ ವ್ಯಕ್ತಿಯನ್ನು ಬಂಧಿಸಿದ್ದು ಕ್ರೂರ ನಡೆ. ಇದನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ ಎಂದು ಹೇಳಿದ್ದಾರೆ.



