
ಉಡುಪಿ: ವಾರ ಪತ್ರಿಕೆಯೊಂದರ ಲೇಖನದಲ್ಲಿ ಕೊರಗ ಸಮುದಾಯದ ಕುರಿತು ಜಾತಿ ನಿಂದನೆ ಮತ್ತು ಅವಹೇಳನ ಮಾಡಿರುವುದಾಗಿ ಆರೋಪಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡಾ ಮಾತನಾಡಿ, ಲೇಖನ ಬರವಣಿಗೆಯು ಕೊರಗದ ಸಮುದಾಯದ ಮಾನವ ಹಕ್ಕು ಗಳ ಘೋರ ಉಲ್ಲಂಘನೆಯಾಗಿದೆ. ಕೊರಗ ಸಮುದಾಯದ ಘನತೆಯನ್ನು ಪ್ರಾಣಿಗಳೊಂದಿಗೆ ಸಮೀಕರಿಸಿ ಬರೆಯಲಾಗಿದೆ ಎಂದು ಆರೋಪಿಸಿದರು.

ಕೊರಗ ಸಮುದಾಯದ ಕುರಿತು ಜಾತಿ ನಿಂದನೆ ಮಾಡಿರುವ ಕೊರಗರನ್ನು ಅವಹೇಳನ ಮಾಡಿರುವ ಕೊರಗರ ಮಾನವ ಘನತೆಗೆ ಕುಂದು ಉಂಟು ಮಾಡಿರುವ ಲೇಖಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳ ಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ, ಪ್ರಧಾನ ಕಾರ್ಯದರ್ಶಿ ವಿನಯ ಅಡ್ವೆ, ಬೊಗ್ರ ಕೊಕ್ಕರ್ಣೆ, ಉಪಾಧ್ಯಕ್ಷೆ ಗಿರಿಜಾ ಜನ್ನಾಡಿ ಮೊದಲಾದವರು ಉಪಸ್ಥಿತರಿದ್ದರು



