ಬಂಟ್ವಾಳ: ತಾಲ್ಲೂಕಿನ ಕೇಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಮಾಜಿಕ ಪರಿಶೋಧನೆ ತಂಡದಿಂದ ನರೇಗಾ ಹಾಗೂ 15ನೇ ಹಣಕಾಸು ಕಾಮರಿಗಳ ಸಾಮಾಜಿಕ ಪರಿಶೋಧನೆ ಕುರಿತು ಅರಿವು ಆಂದೋಲನ ಕಾರ್ಯಕ್ರಮ ಕೈಗೊಳ್ಳಲಾಯಿತು.

ತಾಲೂಕು ಐಇಸಿ ಸಂಯೋಜಕರಾದ ರಾಜೇಶ್, ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಕೆ, ಕೆಲಸಕ್ಕಾಗಿ ಬೇಡಿಕೆ ಸಲ್ಲಿಕೆ ಹಾಗೂ ಇತರ ಮಾಹಿತಿಯನ್ನು ನೀಡಿದರು. ಸಾಮಾಜಿಕ ಪರಿಶೋಧನೆ ತಂಡವು ಗ್ರಾಮ ಪಂಚಾಯಿತಿಯಲ್ಲಿ ಪೂರ್ವಭಾವಿ ಸಭೆ, ಕಾಮಗಾರಿಗಳ ಪರಿಶೀಲನೆ ಫಲಾನುಭವಿಗಳ ಮನೆ ಭೇಟಿ, ಗ್ರಾಮ ಸಭೆಗೆ ಕರಡು ವರದಿಯನ್ನು ಮಾಡುವುದು, ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯ ನಡೆಯಲಿರುವ ಮಾಹಿತಿ ನೀಡಿದರು. ಜ.16ರಂದು ಸಾಮಾಜಿಕ ಪರಿಶೋಧನೆ ಗ್ರಾಮಸಭೆ ನಡೆಯಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆ ಯಶಸ್ವಿಗೊಳಿಸಬೇಕಾಗಿ ತಿಳಿಸಿದರು.

ಸಾಮಾಜಿಕ ಪರಿಶೋಧನೆ ಗ್ರಾಮಸಭೆ ನಡೆಯಲಿರುವ ಬಗ್ಗೆ ವಾಹನ ಪ್ರಚಾರ ನಡೆಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯದರ್ಶಿ ರಾಮ ನಾಯ್ಕ ಎ., ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹೇಮಾವತಿ, ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ ಕೆ., ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಹಾಗೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು



