ಉಡುಪಿ: ರಾಮಮಂದಿರ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ. ನಾವು ಕೂಡ ರಾಮ, ಆಂಜನೇಯರ ಭಕ್ತರೇ ಆಗಿದ್ದೇವೆ. ಆದರೆ ಬಿಜೆಪಿಯವರು ಅದನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಮನೆಯಲ್ಲೂ ದೇವರ ಕೋಣೆ ಇದೆ. ನಾವು ಪ್ರತಿದಿನ ಪೂಜೆ ಮಾಡಿಯೇ ಹೊರಗಡೆ ಕಾಲಿಡುತ್ತೇವೆ. ಆದರೆ ಬಿಜೆಪಿಯವರು ದೇವರನ್ನು ಬೀದಿಗೆ ತಂದು ಬಿಟ್ಟಿದ್ದಾರೆ. ನಾವು ಬಿಜೆಪಿಯವರ ಹಾಗೆ ದೇವರನ್ನು ಇಟ್ಟು ರಾಜಕಾರಣ ಮಾಡುವುದಿಲ್ಲ. ಅವರಿಗೆ ಅಭಿವೃದ್ಧಿ, ಬಡವರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬಿಜೆಪಿಯವರು ರಾಮನನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾನು ನಿಶ್ಚಯವಾಗಿಯೂ ಅಯೋಧ್ಯೆ ಹೋಗುತ್ತೇನೆ. ಪ್ರತಿವರ್ಷ ನಾನು ಆಂಜನೇಯನ ಮಾಲೆ ಹಾಕುತ್ತೇನೆ. ಅದನ್ನು ಭಕ್ತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಹಾಕುತ್ತೇನೆಯೇ ಹೊರತು ಬಿಜೆಪಿಯವರ ಹಾಗೆ ಚುನಾವಣೆ ದೃಷ್ಠಿಯಿಂದ ಅಲ್ಲ. ಇವರಿಗೆ ಚುನಾವಣೆ ಬಂದಾಗ ನೆನಪು ಆಗುವುದು ಧರ್ಮ, ಮಸೀದಿ, ಇಲ್ಲದಿದ್ದರೆ ಪಾಕಿಸ್ತಾನ. ಮತ್ತೊಬ್ಬರ ಹೆಗಲ ಮೇಲೆ ಬಂದೂಕು ಇಟ್ಟೇ ಇವರು ಎರಡು ಅವಧಿಗೆ ಆಡಳಿತ ನಡೆಸಿದ್ದಾರೆ ಎಂದು ಅವರು ಟೀಕಿಸಿದರು



