ರಾಷ್ಟ್ರರಕ್ಷಣೆಗೆ ಸೌಹಾರ್ದ ಸಂಕಲ್ಪ’ ಎನ್ನುವ ಚಿಂತನೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮ ಶ್ಲಾಘನೀಯ, ಆದರೆ ಇದು ಕೇವಲ ಎಸ್.ಕೆ.ಎಸ್.ಎಸ್.ಎಫ್ ಅಥವಾ ಮುಸಲ್ಮಾನರಿಗೆ ಮಾತ್ರ ಸೀಮಿತವಾಗಬಾರದು, ಮುಂದಿನ ದಿನಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಧರ್ಮ ಸಹಿತ ಎಲ್ಲರನ್ನೂ ಸೇರಿಸಿ ನಡೆಸಿದರೆ ಸರಪಳಿ ಇನ್ನಷ್ಟು ಗಟ್ಟಿಯಾಗುತ್ತದೆ’ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಹೇಳಿ ದರು.

ಶುಕ್ರವಾರ ಮೂಡುಬಿದಿರೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಅತ್ಯಂತ ಬಲಿಷ್ಠ, ಅತ್ಯಂತ ಸಂಪತ್ಭರಿತ ರಾಷ್ಟ್ರವಿದ್ದರೆ ಅದು ಭಾರತ, ಸೌಹಾರ್ದತೆಯ ಬಲಿಷ್ಠ ಭಾರತಕ್ಕೆ ನಾವು ನೀವೆಲ್ಲಾ ಒಂದಾಗಬೇಕೆಂದು ಹೇಳಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತಹ ಸೌಹಾರ್ದತೆ, ಒಗ್ಗಟ್ಟು ಈಗ ಎಲ್ಲಿ ಹೋಯಿತೆನ್ನುವುದನ್ನು ಇಂದಿನ ಜನಾಂಗ ಅರಿತುಕೊಳ್ಳ ಬೇಕು, ನಮ್ಮಲ್ಲಿರುವ ಸಣ್ಣ ಸಣ್ಣ ಒಳಜಗಳ, ಸ್ವಾರ್ಥಗಳನ್ನು ಬದಿಗಿಟ್ಟು ನಾವೆಲ್ಲಾ ಒಂದೇ, ನಾವೆಲ್ಲಾ ಭಾರತೀಯರೆಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ನಮ್ಮ ಐಕ್ಯತೆ ಗಟ್ಟಿಯಾಗುತ್ತದೆ ಎಂದರು.
ನಮ್ಮ ಜಿಲ್ಲೆ ಶಾಂತಿ ಸೌಹಾರ್ದತೆಗೆ ಹೆಸರಾದಂತಹ ಜಿಲ್ಲೆ,ಇಲ್ಲಿ ಆಳ್ವಿಕೆ ನಡೆಸಿದ ರಾಜರೆಲ್ಲಾ ಸೌಹಾರ್ದ ಮನೋಭಾವದವರೇ ಆಗಿದ್ದರು, ಪ್ರತಿಯೊಂದು ಧರ್ಮದವರೂ ಪರಸ್ಪರ ಪ್ರೀತಿ, ಸಹಬಾಳ್ವೆಯಿಂದ ಬದುಕಿದವರು, ಮಸೀದಿ, ದೇವಾಲಯ, ಬಸದಿ, ಚರ್ಚ್ ಹೀಗೆ ಧಾರ್ಮಿಕ ಕೇಂದ್ರಗಳಿಗೆ ಎಲ್ಲ ಧರ್ಮದವರ ಕೊಡುಗೆಯಿದೆ, ಮೂಡುಬಿದಿರೆ ಸಹೋದರರೆ, ಭ್ರಾತೃತ್ವಕ್ಕೆ ಹೆಸರಾದ ಕೇಂದ್ರ ಸ್ಥಾನವಾಗಿದೆ, ಅದು ಈಗಲೂ ಇದೆ ಎಂದ ಅವರು ಇಲ್ಲಿಗೆ ಹೈದರಾಲಿ, ಟಿಪ್ಪು ಸುಲ್ತಾನ್ ಬಂದಿದ್ದರು, ಸಣ್ಣಪುಟ್ಟ ಚರ್ಚೆಗಳಾಗುತ್ತಿತ್ತು, ಆದರೆ ಅದನ್ನು ಅರಮನೆಯಲ್ಲೋ, ಗುರುಮನೆಯಲ್ಲೋ, ನೆರೆಮನೆಯಲ್ಲೋ ಕುಳಿತು ಸೌಹಾರ್ದವಾಗಿ ಇತ್ಯರ್ಥ ಪಡಿಸುವವರಿದ್ದರು, ರಾಷ್ಟ್ರರಕ್ಷಣೆಯ ಸಂಕಲ್ಪದಲ್ಲಿ ಇಂತಹ ಮಾನವ ಸರಪಳಿ ಕಾರ್ಯಕ್ರಮಗಳನ್ನು ಪ್ರತೀ ಮೂರು ತಿಂಗಳಿಗೊಮ್ಮೆ ನಡೆಸುವ ಅಗತ್ಯವಿದೆ ಎಂದರು.
ಮಾನವ ಸರಪಳಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ.ಎ. ಉಸ್ಮಾನ್ ಹಾಜಿ ಏರ್ ಇಂಡಿಯಾ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಕೆ. ಅಭಯಚಂದ್ರ, ಡಾ. ಮೋಹನ ಆಳ್ವ, ಸಂಪಿಗೆ ಚರ್ಚ್ ಧರ್ಮಗುರುಗಳಾದ ರೆ.ಫಾ.ವಿನ್ಸೆಂಟ್ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಎಸ್.ವೈ.ಎಸ್. ದ.ಕ. ಜಿಲ್ಲಾಧ್ಯಕ್ಷ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಿ ಸೌಹಾರ್ದತೆ ಕುರಿತಾಗಿ ಮಾತನಾಡಿದರು.
ಶೈಖುನಾ ಇರ್ಷಾದ್ ದಾರಿಮಿ ಮಿತ್ತಬೈಲ್ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್.ಕೆ.ಎಸ್.ಎಸ್.ಎಫ್. ದ.ಕ. ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸ್ವಾಗತಿಸಿ, ರಾಜ್ಯಾಧ್ಯಕ್ಷರಾದ ಅಹ್ಮದ್ ರಫೀಕ್ ಹುದವಿ ಕೋಲಾರಿ ಪ್ರಾಸ್ತಾವಿಕ ಮಾತನಾಡಿದರು.
ಮೂಡುಬಿದಿರೆ ವಲಯಾಧ್ಯಕ್ಷರಾದ ಅಶ್ರಫ್ ಮರೋಡಿ ಪ್ರತಿಜ್ಞೆ ಬೋಧಿಸಿದರು. ಕಾರ್ಯದರ್ಶಿ ಫಾರೂಕ್ ಮೂಡುಬಿದಿರೆ ವಂದಿಸಿದರು.
ಬೆಳಿಗ್ಗೆ ನಡೆದ ಧ್ವಜಾರೋಹಣವನ್ನು ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುರ್ರಹ್ಮಾನ್ (ಅಬ್ಬುಕಾಕ) ನೆರವೇರಿಸಿದ್ದು, ತೋಡಾರ್ ಜುಮ್ಮಾ ಮಸೀದಿಯ ಮುದರ್ರಿಸ್ ಮೂಸಾ ದಾರಿಮಿ ದುವಾ ನೆರವೇರಿಸಿದರು.
ಮಧ್ಯಾಹ್ನ ಲಾಡಿ ಮಸೀದಿ ಬಳಿಯಿಂದ ನಡೆದ ಮಾನವ ಸರಪಳಿ ಜಾಥಾವನ್ನು ಮೂಡುಬಿದಿರೆ ಜುಮ್ಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ದಾರಿಮಿ ಅವರು ಉದ್ಘಾಟಿಸಿದರು.ಮೂಡುಬಿದಿರೆ ವಲಯ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಸಯ್ಯಿದ್ ಅಕ್ರಮ್ ಆಲಿ ತಂಙಳ್ ಅಲ್ ಹಾದಿ ಅವರು ದುವಾ ನೆರವೇರಿಸಿದರು. ಸ್ವಾಗತ ಸಮಿತಿಯ ಕನ್ವಿನರ್ ಅಬ್ದುಲ್ ಅಝೀಝ್ ಮಾಲಿಕ್ ಧ್ವಜ ಹಸ್ತಾಂತರಿಸಿದರು.
ಪುರಸಭಾ ಸದಸ್ಯ ಇಕ್ಬಾಲ್ ಕರೀಮ್, ಆಸಿಫ್ ಆದರ್ಶ್, ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಸಲಾಮ್ ಬೂಟ್ ಬಝಾರ್, ಎಚ್.ಎಮ್ ಅಬ್ದುಲ್ ಖಾದರ್ ಹಾಜಿ ಹಂಡೇಲ್, ಅದ್ದಾಕ ಪುತ್ತಿಗೆ, ಅದ್ದು ಗುಂಡೀರು, ಮುಹಮ್ಮದ್ ಶಾಫಿ, ಮಯ್ಯದ್ದಿ ಗುಂಡುಕಲ್ಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇರ್ಫಾನ್ ಅಸ್ಲಮಿ ಕಲಾಯಿ, ಸವಾದ್ ತೋಡಾರ್ ಕಾರ್ಯಕ್ರಮ ನಿರೂಪಿಸಿದರು.



