ಡ್ರೆಸ್ ಕೋಡ್, ಭೂಮಿ ಅತಿಕ್ರಮಣ, ಸರಕಾರೀಕರಣದಿಂದ ಮುಕ್ತ ವಿಷಯದ ಕುರಿತು ಚರ್ಚೆ
ಉಡುಪಿ: ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ದೇವಸ್ಥಾನ, ಸಂಸ್ಕೃತಿಯ ರಕ್ಷಣೆಗಾಗಿ ‘ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು’ ಅನ್ನು ಇದೇ ಬರುವ ಫೆ. 11ರಂದು ಉಡುಪಿ ಕಿದಿಯೂರು ಹೋಟೆಲ್ ನ ಮಾಧವ ಕೃಷ್ಣ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಉಡುಪಿ ಜಿಲ್ಲಾ ಸಂಯೋಜಕ ಚಂದ್ರ ಮೊಗವೀರ ಹೇಳಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪರಿಷತ್ತಿನಲ್ಲಿ ಜಿಲ್ಲೆಯ ಅನೇಕ ಕಡೆಗಳಿಂದ 300ಕ್ಕಿಂತ ಹೆಚ್ಚು ವಿಶ್ವಸ್ಥರು ಉಪಸ್ಥಿತರಿರಲಿದ್ದಾರೆ. ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಆಯ್ದ ವಿವಿಧ ವಿಷಯಗಳ ಚರ್ಚಾಕೂಟಗಳು ನಡೆಯಲಿವೆ. ಇದರಲ್ಲಿ ‘ದೇವಸ್ಥಾನಗಳನ್ನು ಸನಾತನ ಧರ್ಮಪ್ರಸಾರ ಕೇಂದ್ರಗಳನ್ನಾಗಿಸುವುದು’, ‘ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಮಾಡುವುದು,’ ಅನಧಿಕೃತ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ಅನ್ಯಮತೀಯರಿಂದ ದೇವಸ್ಥಾನಗಳ ಭೂಮಿಯ ಅತಿಕ್ರಮಣ ಮತ್ತು ಸರಕಾರವು ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದರ ವಿರುಧ್ಧ ಪರಿಹಾರೋಪಾಯ, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸ ಇವುಗಳ ನಿಷೇಧ ಮುಂತಾದ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದರು.

ಮಹಾಸಂಘವು ಕೇವಲ 6 ತಿಂಗಳುಗಳಲ್ಲಿ ದೇಶದಾದ್ಯಂತ 275 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ(ಡ್ರೆಸ್ ಕೋಡ್) ಜಾರಿಗೆ ತಂದಿದೆ. ಮಹಾಸಂಘದ ಅಭಿಯಾನದಿಂದ ಪ್ರೇರಿತಾರದ ಅನೇಕ ವಿಶ್ವಸ್ಥರು ತಮ್ಮ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆರ್ವಾಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ರಮೇಶ ಕಾರ್ಣಿಕ್, ಅಂಬಾಗಿಲು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸಹ ಮೊಕ್ತೇಸರ ರಾಜೇಶ್ ಶೇಟ್, ಉಡುಪಿ ಜಿಲ್ಲಾ ಸಮಿತಿ ಸೇವಕ ವಿಶ್ವನಾಥ ನಾಯಕ್ ಉಪಸ್ಥಿತರಿದ್ದರು.



