ಕಡಬ:ಕಡಬದ ಸರಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ ಸೋಮವಾರ ಬೆಳಿಗ್ಗೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಎಂಬಿಎ ವಿದ್ಯಾರ್ಥಿ ಅಭಿನ್ ಕೃತ್ಯ ಎಸಗಲೆಂದು ಭಾನುವಾರ ತನ್ನ ಹುಟ್ಟೂರಾದ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದು,ನಂತರ ಕಡಬಕ್ಕೆ ಬಂದು ಕಡಬದಲ್ಲಿ ಬೇಕರಿಯೊಂದರ ಸಿಸಿ ಟಿವಿಯಲ್ಲಿ ಈತನ ಚಲನವಲನಗಳು ಪತ್ತೆಯಾಗಿದೆ.

ಅಭಿನ್ ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿ. ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ನಿಲಂಬೂರಿನಿಂದ ಹೊರಟ ಆತ ರಾತ್ರಿ ವೇಳೆ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದ ಆತ ಬಳಿಕ ಮಂಗಳೂರಿನಿಂದ ಬಸ್ಸು ಹಿಡಿದು ಕಡಬಕ್ಕೆ ಆಗಮಿಸಿದ್ದಾನೆ ಎನ್ನಲಾಗಿದೆ. ಅಬಿನ್ ಕಾಲೇಜ್ ಪ್ರವೇಶಿಸುವುದಕ್ಕೆ ಮುಂಚೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿಕೊಂಡು ಶಾಲಾ ಆವರಣ ಪ್ರವೇಶಿಸಿದ್ದಾನೆ. ಇದಕ್ಕೆ ಮುಂಚೆ ಈತ ಕಡಬದ ಕೆಳಗಿನ ಬಸ್ ನಿಲ್ದಾಣದ ಬಳಿ ಬೇಕರಿಯಲ್ಲಿ ತನ್ನಲ್ಲಿದ್ದ ಎರಡು ಮೊಬೈಲ್ ಫೋನ್ ಗಳನ್ನು ಚಾರ್ಜ್‌ಗಿಟ್ಟಿದ್ದ. ಈ ವೇಳೆಯೂ ಅತ ಕಪ್ಪು ಫ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೇಕರಿಗೆ ಆತ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ಬಂದಿದ್ದಾನೆ. ಫೋನ್ ಚಾರ್ಜ್‌ಗಿಟ್ಟು, ಅಲ್ಲೇ ಒಂದು ಬ್ಯಾಗ್ ಬಿಟ್ಟಿದ್ದಾನೆ. ಆ ಬಳಿಕ ಬ್ಯಾಗಿನಿಂದ ಯಾವುದೋ ವಸ್ತುವನ್ನು ಪ್ಯಾಂಟ್ ಪಾಕೇಟಿಗೆ ಹಾಕಿ ಅಲ್ಲಿಂದ ಹೊರನಡೆಯುತ್ತಾನೆ. ಇದು ಅಸಿಡ್ ಬಾಟಲ್ ಎನ್ನಲಾಗಿದೆ. ನಂತರದಲ್ಲಿ ಆತ ಈ ಕಪ್ಪು ಬಣ್ಣದ ಬಟ್ಟೆಯನ್ನು ತಹಶಿಲ್ದಾರ್ ಕಚೇರಿ ಸಮೀಪದಲ್ಲಿರುವ ಕಟ್ಟಡವೊಂದರಲ್ಲಿ ಕಪ್ಪು ಬಣ್ಣದ ಬಟ್ಟೆ ಬಿಚ್ಚಿ ಅಲ್ಲಿಂದ ಯೂನಿಫಾರ್ಮ್ ಬಟ್ಟೆ ಧರಿಸಿರಬೇಕು ಎಂದು ಅನುಮಾನಿಸಲಾಗಿದೆ. ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಾಲ್ ಗೆ ತೆರಳುವ ಕೊನೆ ಕ್ಷಣವನ್ನೆ ಕೃತ್ಯಕ್ಕೆ ಆಯ್ಕೆ
ವಿದ್ಯಾರ್ಥಿಗಳೆಲ್ಲರೂ ಪರೀಕ್ಷಾ ಹಾಲ್‌ಗೆ ತೆರಳುವ ತರಾತುರಿಯಲ್ಲಿರುವುದರಿಂದ ಹಾಗೂ ಶಿಕ್ಷಕರು ಪರೀಕ್ಷೆಗೆ ಕೊನೆ ಕ್ಷಣದ ತಯಾರಿಯಲ್ಲಿ ಮಗ್ನವಾಗಿರುವುದರಿಂದ ಕೃತ್ಯ ಎಸಗಿ ಪರಾರಿಯಾಗಬಹುದು ಎಂಬ ಹವಣಿಕೆಯಲ್ಲಿ ಈತ ಇದಕ್ಕಾಗಿಯೇ ಹಾಲ್‌ಗೆ ತೆರಳುವ ಕೊನೆ ಕ್ಷಣವನ್ನೆ ಕೃತ್ಯಕ್ಕೆ ಆಯ್ಕೆ ಮಾಡಿದ್ದ. ಆದರೇ ಇಲ್ಲಿ ಮಾತ್ರ ಲೆಕ್ಕಾಚಾರ ವಿಫಲವಾಗಿದೆ.
ಸಂತ್ರಸ್ತ ವಿದ್ಯಾರ್ಥಿನಿಯರು ಕಲಿಯುತ್ತಿದ್ದ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷದ ಅಂತಿಮ ಪರೀಕ್ಷೆ ನಡೆಯುತ್ತಿದೆ. ಈ ಕಾಲೇಜು ಸೇರಿದಂತೆ ವಲಯದ ಮೂರು ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾಲೇಜು ಪ್ರಮುಖ ಪರೀಕ್ಷಾ ಕೇಂದ್ರವಾಗಿತ್ತು. ಹೀಗಾಗಿ ಪರೀಕ್ಷೆ ಸಮಯ ಈ ಕಾಲೇಜಿಗೆ ಉಳಿದ ಕಾಲೇಜ್‌ನ ಇತರ ವಿದ್ಯಾರ್ಥಿಗಳು ಬರುವ ಕಾರಣ ಈತನ ಬಗ್ಗೆ ಯಾರಿಗೂ ಅನುಮಾನ ಉಂಟಾಗಲು ಸಾಧ್ಯವಿಲ್ಲ. ಹೀಗಾಗಿ ಯಾರಿಗೋ ಅನುಮಾನ ಬಾರದಂತೆ ಕೃತ್ಯ ಎಸಗಲು ಈತ ಎಕ್ಸಾಂ ದಿನವನ್ನೆ ಆಯ್ಕೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಕಡಬದಿಂದಲೇ ಖರೀದಿಸಿದ್ದ ಆ್ಯಸಿಡ್
ಬೆಳಿಗ್ಗೆ 7.30ರ ಸುಮಾರಿಗೆ ಬಂದಿಳಿದ ಆರೋಪಿಯು ಬಳಿಕ ಕಡಬ ಪೇಟೆಯ ಅಂಗಡಿಯೊಂದರಿಂದಲೇ ಆ್ಯಸಿಡ್ ಖರೀದಿಸಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಆರೋಪಿಯು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.ಆದರೆ ಈ ಸಮಯದಲ್ಲಿ ಕಡಬದಲ್ಲಿ ಯಾವುದೇ ಆಸಿಡ್ ಅಂಗಡಿಗಳು ಓಪನ್ ಆಗಲ್ಲ ಎಂದು ತಿಳಿದು ಬಂದಿದೆ. ಹಾಗಾದರೆ ಹಿಂದಿನ ದಿನವೇ ಈತ ಆಸಿಡ್ ಖರೀದಿಸಿದ್ದನೇ ಎನ್ನುವ ಸಂಶಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು
ಕಡಬ ತಾಲೂಕಿನ ರೆಂಜಲಾಡಿ ನಿವಾಸಿಯಾಗಿರುವ ಪ್ರಧಾನ ಸಂತ್ರಸ್ತೆಯನ್ನು ಕಳೆದ ಎರಡು ವರ್ಷಗಳಿಂದ ಆರೋಪಿ ಪೀತಿಸುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಯ ತಾಯಿ ಮೂಲತಃ ಕೇರಳದವರು. ಆರೋಪಿ ಅಬಿನ್ ಕೂಡಾ ಆಕೆಯ ಮನೆಯ ಹತ್ತಿರದ ನಿವಾಸಿ ಎನ್ನಲಾಗುತ್ತಿದ್ದರೂ ಅದು ಸುಳ್ಳು ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು. ಅವರ ಮುಖಾಂತರ ಸಂತ್ರಸ್ತ ವಿದ್ಯಾರ್ಥಿನಿಯ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಈ ವಿಚಾರ ಯುವತಿಯ ತಾಯಿಗೆ ಗೊತ್ತಾಗಿ ಇದನ್ನು ಆಕ್ಷೇಪಿಸಿದ್ದರು. ಇದೇ ಕಾರಣಕ್ಕೆ ಯುವತಿ ಈತನನ್ನು ಉಪೇಕ್ಷೆ ಮಾಡುತ್ತಿದ್ದಳು ಎಂದು ಹೇಳಲಾಗಿದ್ದು, ಇದರಿಂದ ಕುಪಿತಗೊಂಡು ಆರೋಪಿ ಆಸಿಡ್ ದಾಳಿಯ ಕೃತ್ಯ ನಡೆಸಿದ್ದಾನೆ ಎಂದು ಪೋಲೀಸ್ ಮೂಲದಿಂದ ತಿಳಿದು ಬಂದಿದೆ. ಆದರೆ ಇನ್ನೂ ಹಲವಾರು ಊಹಾಪೋಹಗಳು ಬಾಕಿಯಾಗಿದ್ದು, ಪೊಲೀಸರ ತನಿಖೆಯಿಂದ ಹಲವು ವಿಚಾರಗಳು ಬೆಳಕಿಗೆ ಬರಲಿವೆ..



