ಸುಬ್ರಹ್ಮಣ್ಯ :ಬ್ಯಾಂಕ್ ಆಫ್ ಬರೋಡ ಸುಬ್ರಹ್ಮಣ್ಯ ಶಾಖೆಯು ಸ್ಥಳಾಂತರಗೊಂಡು ನೂತನ ಕಟ್ಟಡ ಅಕ್ಷರ ವಸತಿ ಗ್ರಹದ ಕೆಳ ತಳ ಅಂತಸ್ತಿನಲ್ಲಿ ಆರಂಭಗೊಂಡಿರುತ್ತದೆ.

ಶಾಖೆಯನ್ನು ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಜನರಲ್ ಮ್ಯಾನೇಜರ್ ಗಾಯತ್ರಿ ಆರ್ ಅವರು ಟೇಪ್ ಅನ್ನು ಕತ್ತರಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡಿ, ಸುಬ್ರಹ್ಮಣ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಶಾಖೆಗೆ ಉತ್ತಮ ಸ್ಪಂದನೆ ದೊರೆತಿದೆ. ಇಲ್ಲಿಯ ಗ್ರಾಹಕರ ಬೇಡಿಕೆಗನುಗುಣವಾಗಿ ಹಾಗೂ ಅವರ ಅನುಕೂಲಕ್ಕಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದವರು ನಮಗೆ ಉತ್ತಮವಾದ ಸ್ಥಳವನ್ನು ನೀಡಿರುತ್ತಾರೆ. ಇಲ್ಲಿಯ ಶಾಖೆಗೆ ಎಲ್ಲಾ ಗ್ರಾಹಕರು ಹಾಗೂ ದೇವಳದ ನೌಕರರು ಮತ್ತು ವಿಶೇಷವಾಗಿ ಅಕ್ಕಪಕ್ಕದ ಊರುಗಳ ಕೃಷಿಕರು ಬಹಳಷ್ಟು ಸ್ಪಂದನೆ ನೀಡಿರುತ್ತಾರೆ. ಎಲ್ಲರ ಸಹಕಾರದೊಂದಿಗೆ ಈ ಶಾಖೆಯು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸುತ್ತೇನೆ ಎಂದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಮಂಗಳೂರು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜನಾರ್ದನ, ಪುತ್ತೂರು ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ದೇವಿ ಪ್ರಸಾದ ಶೆಟ್ಟಿ, ಉಪ ಪ್ರಾದೇಶಿಕ ವ್ಯವಸ್ಥಾಪಕ ಶ್ರೀ ಮೂರ್ತಿ, ಹತ್ತಿರದ ಬ್ಯಾಂಕ್ ಆಫ್ ಬರೋಡ ಶಾಖೆಯ ವ್ಯವಸ್ಥಾಪಕರು ,ಹಾಗೂ ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಶಾಖೆಯ ವ್ಯವಸ್ಥಾಪಕರಾದ ಕೃಷ್ಣಪ್ರಸಾದ್ ಅವರು ಸ್ವಾಗತಿಸಿದರು . ನೋಜಿ ಬಾಳ್ತಿಲ ಶಾಖೆಯ ವ್ಯವಸ್ಥಾಪಕರಾದ ಶಿವಪ್ರಸಾದ್ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕ ದೇವಿ ಪ್ರಸಾದ್ ಶೆಟ್ಟಿ ಹೊಂದಿಸಿದರು.



