ಕಡಬ: ಪಾಳುಬಿದ್ದು ನಿಷ್ಟ್ರಯೋಜಕವಾಗಿದ್ದ
ರಾಮಕುಂಜದ ಅಮೈ ಕೆರೆ ಸರ್ವಋತು ಕೆರೆಯಾಗಿ ಅಭಿವೃದ್ಧಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಲೋಕಾರ್ಪಣೆಗೊಂಡು ಈಗಾಗಲೇ 5 ವರ್ಷಗಳು ಕಳೆದಿವೆ.

ಒಂದು ಕಾಲದಲ್ಲಿ ಹೂಳು ತುಂಬಿ ಮೈದಾನ ದಂತಿದ್ದ ಅಮೈ ಕೆರೆಯಲ್ಲಿ ಈಗ ಬಿರು ಬೇಸಗೆ ಯಲ್ಲಿಯೂ ನೀರು ಸಾಕಷ್ಟಿದೆ. ಮಾತ್ರವಲ್ಲದೇ ಪರಿಸರದ ಬಾವಿಗಳಲ್ಲಿಯೂ ಬಳಿಕ ನೀರು ಬತ್ತಿಲ್ಲ. ಅಮೈ ಕೆರೆ ಅಭಿವೃದ್ಧಿ ಯಶೋಗಾಥೆ ನಾಡಿನ ಎಲ್ಲೆಡೆ ಪಾಳು ಬಿದ್ದಿರುವ ಕೆರೆಗಳ ಅಭಿವೃದ್ಧಿಗೆ ಪ್ರೇರಣೆಯಾಗಿದೆ.
ರೂ.55 ಲಕ್ಷ ವೆಚ್ಚ: ಕೆರೆ ಅಭಿವೃದ್ಧಿಯ ಸಹಭಾಗಿತ್ವ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದ ರೂ.5 ಲಕ್ಷ ಅನುದಾನ, ಸಣ್ಣ ನೀರಾವರಿ ಇಲಾಖೆ ನೀಡಿದ ರೂ. 20 ಲಕ್ಷ, ಉಳಿದಂತೆ ಉದ್ಯೋಗ ಖಾತ್ರಿ ಯೋಜನೆಯ ರೂ.25 ಲಕ್ಷ ಹೀಗೆ ಒಟ್ಟು ರೂ.55 ಲಕ್ಷ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿತ್ತು. ಬಳಿಕ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕೆರೆಯ ಬಳಿ ಆಕರ್ಷಕ ಉದ್ಯಾನವನ
ರಚನೆಯಾಗಿ ಕೆರೆ ಪರಿಸರದ ಸೊಬಗನ್ನು ಹೆಚ್ಚಿಸಿದೆ. ಊರಿಗೇ ನೀರುಣಿಸುತ್ತಿದ್ದ ಕೆರೆ: ಬೇಸಗೆ, ಮಳೆಗಾಲ
ಎನ್ನುವ ಭೇದವಿಲ್ಲದೆ ಒಂದು ಕಾಲದಲ್ಲಿ ಸಮೃದ್ಧ ವಾಗಿ ನೀರಿನಿಂದ ತುಂಬಿದ್ದ ಅಮೈ ಕೆರೆ ಊರಿನ ಗೋವುಗಳಿಗೆ ಹಾಗೂ ಜನರಿಗೆ ನೀರುಣಿಸುವ ಮೂಲ ವಾಗಿತ್ತು. ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡು ಸರೋವರದಂತೆ ಕಂಡು ಬರುತ್ತಿದ್ದ ಕೆರೆನಿರ್ಲಕ್ಷ್ಯಕ್ಕೊಳಗಾಗಿ ಹೂಳು ತುಂಬಿ ಮೈದಾನದ ರೂಪಕ್ಕೆ ಬಂದಿತ್ತು. ಪರಿಸರದಲ್ಲಿ ಕುಡಿಯುವ ನೀರಿಗೂ ತತ್ವಾರ ಎನ್ನುವ ಪರಿಸ್ಥಿತಿ ಎದುರಾದಾಗ ಗ್ರಾ.ಪಂ.ನ ಕಣ್ಣಿಗೆ ಬಿದ್ದ ಅಮೈ ಕೆರೆ ಇಂದು ಪರಿಸರದ ಜನರ ನೀರಿನ ಬವಣೆಯನ್ನು ಹೋಗಲಾಡಿಸಿದ ಜಲಮೂಲವಾಗಿ ಪರಿವರ್ತನೆಯಾಗಿದೆ. ಸುಮಾರು 80 ಸೆಂಟ್ಸ್ ಜಾಗದಲ್ಲಿ ಕೆರೆ ನಿರ್ಮಾಣವಾಗಿದೆ. ದನ ಕರುಗಳು, ಪ್ರಾಣಿಗಳು ಕೆರೆಗೆ ಇಳಿಯದಂತೆ ಸುತ್ತ ಭದ್ರವಾದ ಆವರಣವನ್ನೂ ನಿರ್ಮಿಸಲಾಗಿದೆ. ಕೆರೆಯಲ್ಲಿ ಗ್ರಾ.ಪಂ. ವತಿಯಿಂದ ಮೀನು ಸಾಕಣೆಯನ್ನು ಕೂಡ ನಡೆಸಲಾಗುತ್ತಿದೆ.
ಅಂತರ್ಜಲ ಮಟ್ಟ ಏರಿಕೆ
ಕೆರೆ ಅಭಿವೃದ್ಧಿಯಾಗಿರುವುದರಿಂದ ಪರಿಸರದಲ್ಲಿ ಅಂತರ್ಜಲಮಟ್ಟ ಏರಿಕೆಯಾಗಿದೆ. ಈಗ ಕೆರೆ ಆಸುಪಾಸಿನಲ್ಲಿ ಉದ್ಯೋಗ ಖಾತರಿಯಡಿ ನಿರ್ಮಿಸಲಾದ ತೆರೆದ ಬಾವಿಗಳಲ್ಲಿ ಬೇಸಗೆ ಯಲ್ಲಿಯೂ ಭರಪೂರ ನೀರು ಸಿಗುವ ಲಕ್ಷಣ ಗೋಚರಿಸುತ್ತಿವೆ. ಜೊತೆಗೆ ಇಲ್ಲಿನ 22ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ತೊಂದರೆ ದೂರವಾಗಿದೆ. ಕೃಷಿ ತೋಟಗಳ ಜಲಮೂಲ ಗಳಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿದೆ. ಕೆರೆ ಅಭಿವೃದ್ಧಿ ಬಳಿಕ ಇಲ್ಲಿ ಕೊರೆಯಲಾದ ಕೊಳವೆಬಾವಿಯಲ್ಲಿ ಸಮೃದ್ದ ನೀರು ಲಭಿಸಿದ ಕಾರಣ ಬಳಿಕ ಪರಿಸರದ ಜನರಿಗೆ ನೀರಿನ ಸಮಸ್ಯೆ ಕಾಡಲೇ ಇಲ್ಲ. ಕೆರೆ ಅಭಿವೃದ್ಧಿ ಮಾಡಿ ಭವಿಷ್ಯದಲ್ಲಿ ನೀರಿನ ಕೊರತೆ ನೀಗಿಸುವ ಕನಸು ಕಂಡ ಗ್ರಾ.ಪಂ.ನ ಯೋಜನೆ ಇಂದು
ಫಲದಾಯಕವಾಗಿದೆ.



