ಉಳ್ಳಾಲ: ನಾಯಿಯೊಂದು ಮರಿ ಮುಂಗುಸಿಯನ್ನು ಹಿಡಿದು ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಸೂರ್ಯಖಂಡದಲ್ಲಿ ಸಂಭವಿಸಿದ್ದು, ಸಮೀಪದ ಲೇಔಟ್ ಪ್ರಬಂಧಕರೊಬ್ಬರು ಅದಕ್ಕೆ ಶುಶ್ರೂಷೆ ನೀಡಿ ಅರಣ್ಯ ಇಲಾಖೆಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.


ಸೂರ್ಯಖಂಡ ನಿರ್ಮಾಣ ಹಂತದ ಲೇಔಟ್ ಪ್ರಬಂಧಕ ಪುಷ್ಪರಾಜ್ ಹರೇಕಳ, ಕರ್ತವ್ಯ ಸಂಬಂಧ ಸ್ಥಳದಲ್ಲಿದ್ದಾಗ, ನಾಯಿಯೊಂದು ಅಲ್ಲೇ ಸಮೀಪ ಮುಂಗುಸಿ ಮರಿಯನ್ನು ಓಡಿಸಿ ಹಿಡಿದು, ನಂತರ ನೆಲಕ್ಕಪ್ಪಳಿಸಿದೆ. ಇದರಿಂದ ಬಾಲ ಹಾಗೂ ತಲೆಗೆ ಗಂಭೀರ ಗಾಯಗೊಂಡ ಮುಂಗುಸಿ ಗಂಭೀರ ಸ್ಥಿತಿಯಲ್ಲಿತ್ತು. ತಕ್ಷಣ ಸ್ಥಳದಲ್ಲಿದ್ದ ಪುಷ್ಪರಾಜ್ ಅವರು ಮುಂಗುಸಿಗೆ ನೀರು ಹಾಯಿಸಿದ್ದು, ತುಂಡಾದ ಬಾಲಕ್ಕೆ ಶುಶ್ರೂಷೆಯನ್ನು ನೀಡಿದ್ದಾರೆ. ನಂತರ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಮಂಗಳೂರು ರೇಂಜಿನ ಬೀಟ್ ಆಫೀಸರ್ ಪ್ರವೀಣ್ ಹಾಗೂ ಅರಣ್ಯ ವೀಕ್ಷಕ ಅಭಿಜಿತ್ ಅವರು ಮುಂಗುಸಿಗೆ ಚಿಕಿತ್ಸೆ ನೀಡಿ ಮರಳಿ ಅರಣ್ಯಕ್ಕೆ ಬಿಡಲು ಕೊಂಡೊಯ್ದಿದ್ದಾರೆ.



