ಕಡಬ :ಚುನಾವಣೆ ಸಮಯದಲ್ಲಿ ರೈತರ ಪರವಾನಿಗೆ ಇರುವ ಬಂದೂಕುಗಳನ್ನು ಠಾಣೆಗಳಲ್ಲಿ ಠೇವಣಿ ಇಡಲು ಸರಕಾರ ಆದೇಶ ನೀಡಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುವ ಸಲುವಾಗಿ ಕೃಷಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ನೇತೃತ್ವದಲ್ಲಿ ಕಡಬದ ಒಕ್ಕಲಿಗ ಸಮುದಾಯ ಭವನದಲ್ಲಿ ಸಮಾಲೋಚನ ಸಭೆ ನಡೆಸಲಾಯಿತು.

ಸಭೆಯಲ್ಲಿ ಕಾನೂನು ಮಾಹಿತಿ ನೀಡಿದ ನ್ಯಾಯವಾದಿ ಕೊಲ್ಲಮೊಗ್ರದ ಪ್ರದೀಪ್ ಕುಮಾರ್ ಕೆ.ಎಲ್.ಅವರು ಬಂದೂಕುಗಳನ್ನು ಠೇವಣಿ ಇಡಲು ಸರಕಾರ ಆದೇಶಿಸಿರುವುದರ ವಿರುದ್ದ ಕಾನೂನು ಹೋರಾಟ ಅನಿವಾರ್ಯವಾಗಿದೆ. ಈಗಾಗಲೇ ಹಲವಾರು ಮಂದಿ ಕೃಷಿಕರು ವೈಯಕ್ತಿಕವಾಗಿ ಕಾನೂನು ಹೋರಾಟ ನಡೆಸಿ ಬಂದೂಕು ಠೇವಣಿ ಇಡುವುದರಿಂದ ವಿನಾಯಿತಿ ಪಡೆದಿದ್ದಾರೆ. ಬಂದೂಕು ಠೇವಣಿ ಇಡುವಂತೆ ಕೃಷಿಕರನ್ನು ಬಲವಂತಪಡಿಸಬಾರದು ಎಂದು ಈಗಾಗಲೇ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಕೇರಳ ರಾಜ್ಯದಲ್ಲಿ ಬಂದೂಕುಗಳನ್ನು ಠೇವಣಿ ಇಡುವ ನಿಯಮವಿಲ್ಲ, ಅದೇ ರೀತಿ ಕರ್ನಾಟಕದಲ್ಲಿಯೂ ಆದೇಶ ಹೊರಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕಾನೂನು ಹೋರಾಟ ಮಾಡಬೇಕಿದೆ. ಆ ರೀತಿ ಆದೇಶವಾದರೆ ಮಾತ್ರ ಕೃಷಿಕರು ಪ್ರತೀ
ಚುನಾವಣೆಯ ವೇಳೆಯೂ ಎದುರಿಸುವ ತೊಂದರೆಯಿಂದ ಪಾರಾಗಬಹುದು ಎಂದು ಅಭಿಪ್ರಾಯಪಟ್ಟರು.
ಉಚ್ಚನ್ಯಾಯಾಲಯದ
ಮೊರೆ ಹೋಗಲು ನಿರ್ಧಾರ
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯವಾದಿ ಪ್ರದೀಪ್ ಕುಮಾರ್ ಕೆ.ಎಲ್. ಅವರ ಮೂಲಕ ಬಂದೂಕು ಠೇವಣಿ ಇಡುವುದರಿಂದ ವಿನಾಯಿತಿ ಪಡೆಯಲು ಮತ್ತು ವಿಚಾರಕ್ಕೆ ಶಾಶ್ವತ ಪರಿಹಾರ ಪಡೆಯಲು ಸಭೆಯಲ್ಲಿ ಭಾಗವಹಿಸಿದ 33 ಮಂದಿ ಕೃಷಿಕರು ವೈಯಕ್ತಿಕ ನೆಲೆಯಲ್ಲಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿ ಅಗತ್ಯ ದಾಖಲೆಗಳನ್ನು ನ್ಯಾಯವಾದಿಗೆ ಹಸ್ತಾಂತರಿಸಿ ವಕಾಲತಿಗೆ ಸಹಿ ಹಾಕಿದರು. ಅರ್ಜಿಯನ್ನು ಎ. 4ರಂದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ
ರೀತಿಯಲ್ಲಿ ಪ್ರಯತ್ನಿಸುವುದಾಗಿ ನ್ಯಾಯವಾದಿ ಭರವಸೆ ನೀಡಿದರು.
ರೈತ ಮುಖಂಡ ವಿಕ್ಟರ್ ಮಾರ್ಟಿಸ್ ಹೊಸಮಠ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಕುಂತೂರು ಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜೇಮ್ಸ್ ಥಾಮಸ್ ವಿ.ಎಂ., ಸವಣೂರಿನ ನಾಟಿ ವೈದ್ಯ ವಾಸುದೇವ ಇಡ್ಯಾಡಿ, ಪ್ರಮುಖರಾದ ವರ್ಗೀಸ್ ತೊಮಸ್ ಎಂಜಿರ, ಸಂತೋಷ್ ಉಳಿಪು, ಚಂದ್ರಶೇಖರ ಗೌಡ ಕೋಡಿಬೈಲು, ಬಾಲಕೃಷ್ಣ ಭಟ್ ಮೂಜೂರುಕಟ್ಟ ಶಿವಪ್ರಕಾಶ್ ನೆಲ್ಯಾಡಿ, ರಜಾಕ್ ಅಡ್ಡಗದ್ದೆ, ಉಮ್ಮರ್ ಮುಳಾರ್, ಕರುಣಾಕರ ಗೌಡ ಮತ್ತಿತರರು ಉಪಸ್ಥಿತರಿದ್ದರು.



