ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮನೆಯಲ್ಲೇ ಮತದಾನ ಕಾರ್ಯಕ್ರಮದಡಿ ಮತದಾನ ಮಾಡಿ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಘಟನೆ ಸಾಸ್ತಾನ ಪಾಂಡೇಶ್ವರದ ಚಡಗರ ಅಗ್ರಹಾರ ಎಂಬಲ್ಲಿ ಸಂಭವಿಸಿದೆ.

ನಿವೃತ್ತ ಗ್ರಾಮಲೆಕ್ಕಾಧಿಕಾರಿ ದಿ. ನಾರಾಯಣ ಉಪಾಧ್ಯ ಅವರ ಪತ್ನಿ ಪಿ. ಯಶೋದಾ ನಾರಾಯಣ ಉಪಾಧ್ಯ (83) ಮೃತಪಟ್ಟ ಮಹಿಳೆ. ಅವರಿಗೆ ಸಣ್ಣ ಪ್ರಮಾಣದ ಎದೆನೋವು, ಸುಸ್ತು ಕಾಣಿಸಿಕೊಂಡಿತ್ತು. ಸೋಮವಾರ ಅವರಿಗೆ ಮನೆಯಿಂದಲೇ ಮತದಾನಕ್ಕೆ ಸಮಯ ನಿಶ್ಚಯವಾಗಿತ್ತು. ಮನೆಯವರು ಆಸ್ಪತ್ರೆಗೆ ಹೋಗುವ ಎಂದು ಎಷ್ಟೇ ಒತ್ತಾಯಿಸಿದರೂ ಅಜ್ಜಿ ಒಪ್ಪಲಿಲ್ಲ. ಮತದಾನ ಮುಗಿಸಿಯೇ ನಾನು ಆಸ್ಪತ್ರೆಗೆ ತೆರಳುವುದು ಎಂದು ಹಠ ಹಿಡಿದಿದ್ದರು. ಅದರಂತೆ ಕಾದು ಮತದಾನ ಮಾಡಿ ಬಳಿಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅನಾರೋಗ್ಯ ಉಲ್ಬಣಗೊಂಡು ರಾತ್ರಿ 9 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.



