ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಡ್ರಾಮಾ ಜ್ಯೂನಿಯರ್ಸ್’ ಕೂಡ ಒಂದು. ಮಕ್ಕಳಿನ ಪ್ರತಿಭೆಯನ್ನು ಬೆಳಕಿಗೆ ತರುವಂತಹ ಈ ಶೋ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಅಂದಹಾಗೆ, ಕೆಲ ತಿಂಗಳ ಹಿಂದೆ ಶುರುವಾಗಿದ್ದ ‘ಡ್ರಾಮಾ ಜ್ಯೂನಿಯರ್ಸ್’ ಸೀಸನ್ 5ಕ್ಕೆ ಕೊನೆಗೂ ತೆರೆಬಿದ್ದಿದೆ. ಈ ಬಾರಿ ವಿಷ್ಣು ಕುಣಿಗಲ್ ಮತ್ತು ರಿಷಿಕಾ ಕುಂದೇಶ್ವರ ಅವರು ಜಂಟಿಯಾಗಿ ವಿನ್ನರ್ ಪಟ್ಟ ಪಡೆದುಕೊಂಡಿದ್ದಾರೆ.


ಬಾನುವಾರ ನಡೆದಿದ್ದ ಫೈನಲ್ ರೌಂಡ್‌ನಲ್ಲಿ ರಿಷಿಕಾ ಕುಂದೇಶ್ವರ್ ಹಾಗೂ ವಿಷ್ಣು ಇಬ್ಬರೂ ಜಂಟಿಯಾಗಿ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಹಲವು ವಿಭಾಗಗಳಲ್ಲಿ ನಡೆದಿದ್ದ ಈ ಡ್ರಾಮಾ ಜ್ಯೂನಿಯರ್ ಕಾಂಪಿಟೀಷನನಲ್ಲಿ ಆರಂಭದಿಂದಲೇ ರಿಷಿಕಾ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪೌರಾಣಿಕ , ಐತಿಹಾಸಿಕ, ಜಾನಪದ, ಶಾಸ್ತ್ರೀಯ, ಮತ್ತು ಕಾಮಿಡಿ ವಿಭಾಗದಲ್ಲಿ ಉತ್ತಮ ಪರ್ಫಾರ್ಮೆನ್ಸ್ ತೋರಿಸುವ ಮೂಲಕ ರಿಷಿಕಾ ಫೈನಲ್ ಹಂತ ತಲುಪಿದ್ದರು. ಈ ಸೀಸನ್‌ನಲ್ಲಿ ಅತೀ ಹೆಚ್ಚು ವ್ಯಯಕ್ತಿಕ ಅವಾರ್ಡ್‌ಗಳನ್ನು ರಿಷಿಕಾ ಪಡೆದುಕೊಂಡಿರುವುದು ಅವರ ಮತ್ತೊಂದು ಸಾಧನೆ.

“ರಿಷಿಕಾ ಕುಂದೇಶ್ವರ ಈ ಸೀಸನ್‌ನ ಫೇವರಿಟ್ ಸ್ಪರ್ಧಿ. ಸ್ಪಷ್ಟತೆಗೆ ಇನ್ನೊಂದು ಹೆಸರೇ ರಿಷಿಕಾ ಎಂದು ಹೇಳಬಹುದು. ರಿಷಿಕಾ ವೇದಿಕೆ ಮೇಲೆ ಬಂದರೆ ಅಲ್ಲೊಂದು ಅದ್ಭುತ ಪರ್ಫಾರ್ಮೆನ್ಸ್ ಖಂಡಿತ ಇರುತ್ತದೆ ಮತ್ತು ಅಲ್ಲಿ ಹುಡುಕಿದರೂ ತಪ್ಪು ಸಿಗಲ್ಲ” ಎಂದು ರವಿಚಂದ್ರನ್ ಹೇಳಿದರೆ, “ರಿಷಿಕಾನ ನಂಬಿ ಯಾವ ಪಾತ್ರವನ್ನಾದರೂ ನೀಡಬಹುದು” ಎಂದು ಲಕ್ಷ್ಮೀ ಹೇಳಿದ್ದಾರೆ. ಉಳಿದ ವಿಜೇತರ ಬಗ್ಗೆಯೂ ತೀರ್ಪುಗಾರರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ರಿಷಿಕಾ ಮಂಗಳೂರಿನ ಪತ್ರಕರ್ತ, ಜಿಲ್ಲಾ ಪತ್ರಕರ್ತ ಸಂಘದ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಹಾಗೂ ಸಂಧ್ಯಾ ದಂಪತಿಯ ಪುತ್ರಿಯಾಗಿದ್ದು, ಕದ್ರಿಯಲ್ಲಿ ವಾಸವಾಗಿದ್ದಾರೆ.






