ಮೂಡುಬಿದಿರೆ: ಇದು ಒಳ್ಳೆಯ ವಿಷಯ.ಶಾಸಕರು ಆ ರೀತಿ ಹೇಳಿರುವುದರಿಂದ ಅವರು ಯಾವಕಡೆ ಇದ್ದಾರೆಂದು ಗೊತ್ತಾಗುತ್ತದೆ, ಅವರು ನಮ್ಮೊಂದಿಗಿದ್ದಾರೆ, ಅವರಿಗೆ ಕೃತಜ್ಞತೆಗಳು-ಹೀಗೆಂದವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ.

ಮೂಡುಬಿದಿರೆಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ “ಇತ್ತೀಚೆಗೆ ಮೂಲ್ಕಿಯಲ್ಲಿ ನಡೆದ ಬಿಲ್ಲವ ಮಹಾಮಂಡಲದ ಸಮಾವೇಶದಲ್ಲಿ ಬಿಲ್ಲವ ಸಮುದಾಯದವರು ಬಿಲ್ಲವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎನ್ನುವರ್ಥದಲ್ಲಿ ಮಾತನಾಡಿದ್ರಲ್ಲಾ… ಈ ಬಗ್ಗೆ ನಿಮ್ಮ ಅಭಿಪ್ರಾಯವೇನು”? ಎಂದು ಪತ್ರಕರ್ತರು ಕೇಳಿದಾಗ ಈ ಮೇಲಿನಂತೆ ಉತ್ತರಿಸಿದರು.
ಶಾಸಕರ ಮಾತಿನ ಅರ್ಥ ಈಬಾರಿ ಪದ್ಮರಾಜ್ ಅವರನ್ನು ಗೆಲ್ಲಿಸಬೇಕೆಂದಾಗಿದೆ,ಹಾಗಾಗಿ ಅವರು ಈಬಾರಿ ಬಿಲ್ಲವ ಸಮುದಾಯದ ಪದ್ಮರಾಜ್ ಅವರ ಬೆಂಬಲಕ್ಕಿದ್ದಾರೆನ್ನುವುದಾಗಿದೆ,ಅವರ ಈ ನಡೆಗೆ ತುಂಬಾ ಕೃತಜ್ಞತೆಗಳು,ಅವರಿಗೆ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಮಿಥುನ್ ರೈ ಹೇಳಿದರು.
ಕಾಂಗ್ರೆಸ್ ಗೆ ಶಕ್ತಿ ಕೊಡುತ್ತಿದ್ದವರೇ ಹಿಂದುಳಿದ ವರ್ಗದವರು,ಕ್ರಮೇಣ ಅದು ಬಿಜೆಪಿ ಪಾಲಾಯಿತು, ಆದರೆ ಈಬಾರಿ ಹಿಂದುಳಿದ ವರ್ಗದವರಿಗೆ ಬಿಜೆಪಿಯ ದುರಾಡಳಿತ ಅರ್ಥವಾಗಿದೆ,ಕಾಂಗ್ರೆಸ್ ಆಡಳಿತದ ಮೇಲೆ ವಿಶ್ವಾಸ ಮೂಡಿದೆ,ಈಬಾರಿ ಮತ್ತೆ ಕಾಂಗ್ರೆಸ್ ಗೆ ಶಕ್ತಿ ತುಂಬಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಈಬಾರಿ ಪದ್ಮರಾಜ್ ಅವರು ದಾಖಲೆಯ ಮತಗಳ ಅಂತರದಲ್ಲಿ ಜಯಗಳಿಸಲಿದ್ದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಮತಗಳ ಲೀಡ್ ಸಿಗಲಿದೆ ಎಂದರು.
ನಂಬರ್ ಒನ್ ಸಂಸದ ಎಂದೆನಿಸಿಕೊಂಡಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಧಾನಿ ಮೋದಿ,ಅಮಿತ್ ಶಾ,ಜೆ.ಪಿ.ನಡ್ಡಾ ಅವರೇ ಶೂನ್ಯ ಅಭಿವೃದ್ಧಿಯ ಸಂಸದನೆಂದು ಸರ್ಟಿಫಿಕೇಟ್ ನೀಡಿ ಈಬಾರಿ ಟಿಕೆಟ್ ನಿರಾಕರಿಸಿದ್ದಾರೆ,ಕಳೆದ ಹದಿನೈದು ವರ್ಷಗಳಲ್ಲಿ ಸಂಸದರಿಗೆ ಈ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯೋಚನೆಯೇ ಬರಲಿಲ್ಲ, ಅವರಿಗೆ ಯೋಚನೆ ಬಂದಿದ್ದು ಜಿಲ್ಲೆಗೆ ಬೆಂಕಿ ಕೊಡುವುದು ಮಾತ್ರವಾಗಿತ್ತೆಂದು ಹೇಳಿದ ಅವರು ರಾಜ್ಯದ ಜನತೆ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಸಂತುಷ್ಟರಾಗಿದ್ದಾರೆ,ವಿಧಾನಸಭಾ ಚುನಾವಣೆಗೆ ಮುನ್ನ ಈ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದವರೇ ಈ ಜಿಲ್ಲೆಯವರು,ಈಗ ಅದರ ಪ್ರಯೋಜನ ಪಡೆಯುತ್ತಿರುವವರೂ ಇದೇ ಜಿಲ್ಲೆಯವರಾಗಿದ್ದಾರೆಂದರು.
ನಾವು ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಗ್ಯಾರಂಟಿ ಬಗ್ಗೆ ಹೇಳಿದಾಗ ನಮ್ಮ ಗ್ಯಾರಂಟಿ ಕಾರ್ಡನ್ನು ಹರಿದು ಬಿಸಾಡಿದವರೇ ಈಗ ಅದರ ಫಲಾನುಭವಿಗಳಾಗಿ ನಮಗೆ ಕುಡಿಯಲು ಹಾಲು ನೀಡಿ ಕ್ಷಮೆಯಾಚಿಸಿದ್ದಾರೆ,ಈ ಜಿಲ್ಲೆಯಲ್ಲೂ ಸಾಕಷ್ಟು ದೊಡ್ಡ ಸಂಖ್ಯೆಯ ಗ್ಯಾರಂಟಿ ಫಲಾನುಭವಿಗಳಿದ್ದು ಅವರೆಲ್ಲರ ಬೆಂಬಲ ಈಬಾರಿ ಕಾಂಗ್ರೆಸ್ ಪಕ್ಷದತ್ತ ಇದೆ ಎಂದ ಮಿಥುನ್ ರೈ, ಬಿಜೆಪಿಯವರ ಹಿಂದುತ್ವ ಜನರಿಗೆ ಅರ್ಥವಾಗಿದೆ, ಪರಶುರಾಮರಿಗೆ ಅಗೌರವ ತೋರಿದ ಇವರ ಯಾವ ಹಿಂದುತ್ವ? ಇವರು ಯಾವ ಮುಖದಲ್ಲಿ ಹಿಂದುತ್ವವನ್ನು ಎದುರಿಟ್ಟು ಮತಯಾಚಿಸುತ್ತಾರೆ ಎಂದು ಪ್ರಶ್ನಿಸಿದರು.
ಕಳೆದ ಮೂರು ದಶಕಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಶೂನ್ಯ,ಮತ್ತೆ ಈ ಜಿಲ್ಲೆ ಅಭಿವೃದ್ಧಿ ಹೊಂದಲು,ಉದ್ಯೋಗ ಸಿಗುವಂತಾಗಲು ಪದ್ಮರಾಜ್ ಅವರಂತಹ ಸಮರ್ಥ, ಉತ್ಸಾಹಿ ತರುಣನ ಅಗತ್ಯವಿದೆ, ಬುದ್ಧಿವಂತ ಜಿಲ್ಲೆಯ ಮತದಾರರು ಈಬಾರಿ ಪದ್ಮರಾಜ್ ಅವರನ್ನೇ ಬೆಂಬಲಿಸಿ ಜಿಲ್ಲೆಯಲ್ಲಿ ಹೊಸ ಇತಿಹಾಸ ನಿರ್ಮಾಣಕ್ಕೆ ಕಾರಣರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖರಾದ ವಸಂತ ಬೆರ್ನಾರ್ಡ್, ಹರ್ಷವರ್ಧನ ಪಡಿವಾಳ್, ಚಂದ್ರಹಾಸ ಸನಿಲ್, ಸುರೇಶ್ ಕೋಟ್ಯಾನ್, ರಾಜೇಶ್ ಕಡಲಕೆರೆ, ಮುಹಮ್ಮದ್ ಅಸ್ಲಮ್, ಪುರಂದರ ದೇವಾಡಿಗ, ಪ್ರವೀಣ್ ಜೈನ್, ವಲೇರಿಯನ್ ಸಿಕ್ವೇರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



