ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಪರಿಹಾರ ಕೋರಿ ಮೇಲ್ಮನವಿ ಸಲ್ಲಿಸುವ ಹಿರಿಯ ನಾಗರಿಕರಿಗೆ ವಕೀಲರ ಮೂಲಕ ಪ್ರತಿನಿಧಿಸಿಕೊಳ್ಳುವ ಹಕ್ಕಿದೆ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರು: ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯಡಿ ಪರಿಹಾರ ಕೋರಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಅಥವಾ ಮೇಲ್ಮನವಿ ಸಲ್ಲಿಸುವ ಹಿರಿಯ ನಾಗರಿಕರು ವಕೀಲರ ಮೂಲಕ ಪ್ರತಿನಿಧಿಸಿಕೊಳ್ಳುವ ಹಕ್ಕು ಹೊಂದಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಮ್ಮ ಆಸ್ತಿಯನ್ನು ಮಕ್ಕಳು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ ಮೇಲ್ಮನವಿಯ ಸಂಬಂಧ ತಮ್ಮನ್ನು ವಕೀಲರು ಪ್ರತಿನಿಧಿಸಲು ಅನುಮತಿ ನೀಡಬೇಕೆಂಬ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಗಳು ತಿರಸ್ಕರಿಸಿ ಆದೇಶಿಸಿದ್ದರು.
ಈ ಆದೇಶ ರದ್ದು ಕೋರಿ ಪುತ್ತೂರು ತಾಲೂಕಿನ ನಿವಾಸಿ ಕೆ. ಶ್ರೀನಿವಾಸ್ ಗಾಣಿಗ (82) ಎಂಬವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕ ರಕ್ಷಣಾ ಕಾಯ್ದೆಯ ಸಲ್ಲಿಕೆಯಾದ ಅರ್ಜಿ ಮತ್ತು ಮೇಲ್ಮನವಿಯ ಸಂಬಂಧ ಪಕ್ಷಗಾರರಾದ ಹಿರಿಯ ನಾಗರಿಕರು ನೇರವಾಗಿ ಮನವಿ ಸಲ್ಲಿಸಬೇಕು. ಯಾವುದೇ ವಕೀಲರನ್ನು ಪ್ರತಿನಿಧಿಸಬಾರದು ಎಂಬುದನ್ನು ಕಡ್ಡಾಯಗೊಳಿಸಿರುವ ಕಾಯ್ದೆಯ ಸೆಕ್ಷನ್ 17, ವಕೀಲರ ಕಾಯ್ದೆ ಸೆಕ್ಷನ್ 30ಕ್ಕೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಘೋಷಿಸಿದೆ.
ಅಷ್ಟೇ ಅಲ್ಲದೆ, ಆ ಸೆಕ್ಷನ್ ಜಾರಿಗೊಳಿಸದಂತೆ ಆದೇಶಿಸಿದೆ. ಪ್ರಕರಣದಲ್ಲಿ ಶ್ರೀನಿವಾಸ್ ಅವರನ್ನು ವಕೀಲರು ಪ್ರತಿನಿಧಿಸುವಂತಿಲ್ಲ ಎಂದು ತಿಳಿಸಿ ಜಿಲ್ಲಾಧಿಕಾರಿ 2023ರ ಫೆ.21ರಂದು ನೀಡಿದ್ದ ಹಿಂಬರಹವನ್ನೂ ರದ್ದುಪಡಿಸಿ ಆದೇಶಿಸಿದ್ದು, ಅರ್ಜಿಯಲ್ಲಿನ ಅಂಶಗಳನ್ನು ಆಧರಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಮಾಡಬೇಕು ಎಂದು ನಿರ್ದೇಶನ ನೀಡಿದೆ.



