ಫಿಲಿಪ್ಪೀನ್ಸ್ ಸಾಕ್ಷರತೆಯ ಪ್ರಮಾಣವು ಶೇಕಡಾ 97ಕ್ಕೆ ಏರಿಕೆಯಾಗಿದ್ದು, ಕಳೆದ ಐದು ವರ್ಷಗಳಲ್ಲಿ ಶೇಕಡಾ 1.2 ರಷ್ಟು ಸುಧಾರಿಸಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಮನಿಲಾ: ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಗೆ ಸಾಕ್ಷರತೆ ಅತ್ಯಂತ ನಿರ್ಣಾಯಕ. ಉತ್ತಮ ಶಿಕ್ಷಣ ಪಡೆದ ಮಕ್ಕಳು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕ ಕೊಡುಗೆ ನೀಡುತ್ತಾರೆ.
ಇದೀಗ, ಫಿಲಿಪ್ಪೀನ್ಸ್‌ನಲ್ಲಿ ಸಾಕ್ಷರತೆಯ ಪ್ರಮಾಣವು ಶೇಕಡಾ 97ಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ 1.2% ಸುಧಾರಿಸಿದೆ ಎಂದು ಅಲ್ಲಿನ ಸರ್ಕಾರ ಅಂಕಿಅಂಶ ನೀಡಿದೆ.
2020ರ ಜನಸಂಖ್ಯೆ ಮತ್ತು ವಸತಿ ಗಣತಿ ಸಮೀಕ್ಷೆಯ ಫಲಿತಾಂಶಗಳನ್ನು ಉಲ್ಲೇಖಿಸಿ ಫಿಲಿಪ್ಪೀನ್ಸ್ ಅಂಕಿಅಂಶ ಪ್ರಾಧಿಕಾರ (PSA) ನೀಡಿದ ಮಾಹಿತಿಯಂತೆ, ಐದು ವರ್ಷಕ್ಕಿಂತ ಮೇಲ್ಪಟ್ಟ 97.6 ಮಿಲಿಯನ್ ಫಿಲಿಪ್ಪೀನ್ಸ್ ಜನರಲ್ಲಿ 94.6 ಮಿಲಿಯನ್ ಸಾಕ್ಷರಸ್ಥರಾಗಿದ್ದಾರೆ. ಅವರು ದೇಶದ ಯಾವುದೇ ಭಾಷೆ ಅಥವಾ ಉಪಭಾಷೆಗಳಲ್ಲಿ ಸರಳ ಸಂದೇಶವನ್ನು ಓದುವುದು ಮತ್ತು ಬರೆಯಬಲ್ಲರು ಎಂದು ತಿಳಿಸಿದೆ.
ಮೆಟ್ರೋ ಮನಿಲಾ ಪ್ರದೇಶವು 98.9% ಅತ್ಯಧಿಕ ಸಾಕ್ಷರತೆ ದರ ಹೊಂದಿದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಮಿಂಡನಾಒಹಾದ್‌ನಲ್ಲಿನ ಬ್ಯಾಂಗ್‌ಸಮೊರೊ ಸ್ವಾಯತ್ತ ಪ್ರದೇಶವು 86.4 ಪ್ರತಿಶತದಷ್ಟು ಕಡಿಮೆ ಸಾಕ್ಷರತೆಯ ದರ ಹೊಂದಿದೆ. ಹಾಗೆಯೇ, 2020ರಲ್ಲಿ ಸಾಕ್ಷರತೆಯ ಪ್ರಮಾಣವು ಮಹಿಳೆಯರಲ್ಲಿ (ಶೇಕಡಾ 97.1) ಸ್ವಲ್ಪ ಹೆಚ್ಚಾಗಿದೆ, ಪುರುಷರ ಸಾಕ್ಷರತೆ ಶೇಕಡಾ (96.8) ಇದೆ. 2015 ರಲ್ಲಿದ್ದ ಸ್ಥಿತಿಯೇ ಈಗಲೂ ಮುಂದಿವರೆದಿದೆ ಎಂದು ಡೇಟಾದಿಂದ ತಿಳಿಯಬಹುದು.
ಮಾಹಿತಿಯ ಪ್ರಕಾರ, ಪ್ರತಿ ಆರು ಕಾಲೇಜು ಪದವೀಧರರಲ್ಲಿ ಒಬ್ಬರು ಶಿಕ್ಷಣ ವಿಜ್ಞಾನದಲ್ಲಿ ಪದವಿ ಹೊಂದಿದ್ದಾರೆ. ಪುರುಷರು ಮ್ಯಾನೇಜ್‌ಮೆಂಟ್ ಮತ್ತು ಅಡ್ಮಿನಿಸ್ಟ್ರೇಷನ್ ಕೋರ್ಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ, ಮಹಿಳೆಯರು ಶಿಕ್ಷಣ ವಿಜ್ಞಾನ ಕೋರ್ಸ್‌ಗಳನ್ನು ಆರಿಸಿಕೊಳ್ಳುತ್ತಿದ್ದಾರೆ.



