ನವದೆಹಲಿ: ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಇಂದು ನಡೆಯಲಿದ್ದು, ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 49 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ವಿಶೇಷವೆಂದರೆ ಈ ಐದನೇ ಹಂತದ ಚುನಾವಣೆಯಲ್ಲಿ ಹಲವು ದಿಗ್ಗಜರ ಭವಿಷ್ಯ ನಿರ್ಧಾರವಾಗಲಿದೆ. ಇವರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಸ್ಮೃತಿ ಇರಾನಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಸೇರಿದ್ದಾರೆ.

ಈ ಸುತ್ತಿನಲ್ಲಿ 4.26 ಕೋಟಿ ಮಹಿಳೆಯರು ಮತ್ತು 5,409 ಮಂಗಳಮುಖಿ ಮತದಾರರು ಸೇರಿದಂತೆ 8.95 ಕೋಟಿಗೂ ಹೆಚ್ಚು ಜನರು ಮತದಾನ ಮಾಡಲಿದ್ದಾರೆ. ಈ ಹಂತದಲ್ಲಿ ಚುನಾವಣೆ ನಡೆಸಲು 94,732 ಮತಗಟ್ಟೆಗಳಲ್ಲಿ 9.47 ಲಕ್ಷ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರದ 13, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದಿಂದ 7, ಬಿಹಾರದಿಂದ 5, ಜಾರ್ಖಂಡ್‌ನಿಂದ 3, ಒಡಿಶಾದಿಂದ 5, ಜಮ್ಮು ಮತ್ತು ಕಾಶ್ಮೀರದಿಂದ ಒಂದು ಮತ್ತು ಲಡಾಖ್‌ನ ಒಂದು ಲೋಕಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ವಿಶೇಷವೆಂದರೆ ಏಳು ಹಂತಗಳಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಐದನೇ ಹಂತದಲ್ಲಿ ಅತಿ ಕಡಿಮೆ ಸ್ಥಾನಗಳಿಗೆ ಮತದಾನ ನಡೆಯಲಿದೆ.



