ಕಿನ್ನಿಗೋಳಿ : ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ, ಅಸಮರ್ಪಕವಾಗಿ ಹೋಟೆಲ್ ಬಾರ್, ವಸತಿಸಮುಚ್ಚಯಗಳ ಘನತ್ಯಾಜ್ಯ, ಮಳೆ ನೀರು ಹಾದು ಹೋಗುವ ತೋಡಿನಲ್ಲಿ ಹರಿಯಲು ಬಿಡುವುದನ್ನ ಖಂಡಿಸಿ, ಘನತ್ಯಾಜ್ಯ ವಿಲೇವಾರಿಗೆ ಶಾಶ್ವತ ಮುಕ್ತಿ ನೀಡಬೇಕೆಂದು ಆಗ್ರಹಿಸಿ ಕಿನ್ನಿಗೋಳಿ ಬಿತ್ತುಲ್ ಪರಿಸರದ ಸಾರ್ವಜನಿಕರು ಪಟ್ಟಣ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು,

ಪಟ್ಟಣ ಪಂಚಾಯತ್ 2021ರಲ್ಲಿ ಅಸ್ತಿತ್ವಕ್ಕೆ ಬಂದು, ಮೂರು ವರ್ಷಗಳು ಕಳೆದರೂ ಇಲ್ಲಿನ ಸ್ಥಳೀಯ ಸಮಸ್ಯೆಗಳಿಗೆ, ಮೂಲಭೂತ ಸೌಕರ್ಯವಾದ ಸಮರ್ಪಕ ಕಸವಿಲೇವಾರಿ, ಘನತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಸಾಧ್ಯವಾಗಿಲ್ಲ, ವಸತಿ ಸಮುಚ್ಚಯಗಳು ವಾಣಿಜ್ಯ ಸಂಕೀರ್ಣಗಳು ದಿನದಿಂದ ದಿನಕ್ಕೆ ತಲೆಎತ್ತುತ್ತಿದ್ದು ಅದರಂತೆ ಘನತ್ಯಾಜ್ಯ ಕಸಗಳ ಸಮಸ್ಯೆ ಪ್ರಮಾಣ ಕೂಡ ಹೆಚ್ಚುತ್ತಿದೆ, ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ನಾಲ್ಕು ಪಟ್ಟು ತೆರಿಗೆ ಹೆಚ್ಚಿಸಲಾಗಿದೆ, ತೆರಿಗೆ ಹಣವನ್ನು ಕ್ಲಪ್ತ ಸಮಯಕ್ಕೆ ಪಡೆದುಕೊಳ್ಳುವ ಪಟ್ಟಣ ಪಂಚಾಯತ್ ಸಮರ್ಪಕವಾಗಿ ಮೂಲಸೌಕರ್ಯಗಳನ್ನ ಒದಗಿಸುತ್ತಿಲ್ಲ, ಈಗಾಗಲೇ ಈ ಸಮಸ್ಯೆ ಬಗ್ಗೆ ಕಳೆದೊಂದು ವರ್ಷದಿಂದ ಲಿಖಿತ ದೂರು ನೀಡಿದರೂ, ಟಿವಿ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳು ವರದಿ ಬಿತ್ತರಿಸುವ ಮೂಲಕ ಎಚ್ಚರಿಸಿದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನಲ್ಲ, ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆಯದೆ ಇರುವುದರಿಂದ ಆಡಳಿತ ಮಂಡಳಿ ರಚನೆಯಾಗಿಲ್ಲ, ಅಧಿಕಾರಿಗಳಿಗೆ ಜನರ ಬಗ್ಗೆ ಕರುಣೆಯೇ ಇಲ್ಲದಂತಾಗಿದೆ,ಬಿತ್ತುಲ್ ಪರಿಸರದ ಲ್ಲಿ ಹರಿಯುವ ಘನ ತ್ಯಾಜ್ಯ ಮುಕ್ತಿಗೆ ಕಾಲಮಿತಿ ತಿಳಿಸುವಂತೆ ನಾಗರೀಕರು ಒತ್ತಾಯಿಸಿದರು, ಎರಡು ದಿನಗಳಲ್ಲಿ ಸರಿಪಡಿಸುವ ಭರವಸೆ ಅಧಿಕಾರಿಗಳು ನೀಡಿದರು, ವಿಫಲವಾದರೆ ಅದೇ ತೋಡಿನಲ್ಲಿ ಹರಿಯುವ ತ್ಯಾಜ್ಯ ನೀರನ್ನು ಕ್ಯಾನು ಬ್ಯಾರಲ್ ಗಳಲ್ಲಿ ಸಂಗ್ರಹಣೆ ಮಾಡಿ ಪಟ್ಟಣ ಪಂಚಾಯತ್ ಕಚೇರಿ ಎದುರುಗಡೆ ಧರಣಿ ಕುಳಿತುಕೊಳ್ಳುವ ಎಚ್ಚರಿಕೆಯನ್ನ ನಾಗರೀಕರು ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಂತಾನ್ ಡಿಸೋಜ, ಸಾಮಾಜಿಕ ಕಾರ್ಯಕರ್ತ ಸ್ಟ್ಯಾನಿ ಪಿಂಟೋ ಉಪಸ್ಥಿತರಿದ್ದರು.



