ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಮರಗಳು ಧರೆಗುರುಳಿದ್ದು, ಕಾಲುಸಂಕ ಮುಳುಗಡೆಯಾಗಿದೆ.
ಶೃಂಗೇರಿ ತಾಲೂಕಿನ ಮೇಲು ಬೈಲು ಗ್ರಾಮದಲ್ಲಿ ಮಣ್ಣು ಕುಸಿದು ಆರು ಮನೆಗಳು ಅಪಾಯಕ್ಕೆ ಸಿಲುಕಿವೆ.
ಉತ್ತಮೇಶ್ವರ ರಸ್ತೆ ಕಾಮಗಾರಿ ಇಲಾಖೆಯಿಂದ ಗ್ರಾಮ ಸಡಖ್ ಯೋಜನೆಯಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಇಲ್ಲಿ ಮಣ್ಣು ತೆಗೆಯಲಾಗಿತ್ತು. ಇದೇ ರಸ್ತೆಯ ಮತ್ತೊಂದು ಕಡೆಯಲ್ಲಿ ಕುಸಿತ ಉಂಟಾಗಿದೆ. ಸ್ಥಳಕ್ಕೆ ಶೃಂಗೇರಿ ತಹಶೀಲ್ದಾರ್ ಗೌರಮ್ಮ ಹಾಗೂ ಅರ್.ಐ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಕಳೆದ ಎರಡು ದಿನದಿಂದ ಮೇಲ್ಪಾಲ್ ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದೆ. ಮನೆಯ ಮುಂಗಡ ನಿಂತಿದ್ದ ಸಂದರ್ಭ ಧರೆ ಕುಸಿತ ಉಂಟಾಗಿದ್ದು, ವ್ಯಕ್ತಿಯೊಬ್ಬರು ಅದೃಷ್ಟವಶಾತ್ ಪಾರಾದ ಘಟನೆ ಎನ್. ಆರ್. ಪುರ ತಾಲೂಕಿನ ಮೇಲ್ಪಾಲ್ನಲ್ಲಿ ನಡೆದಿದೆ. ಮೇಲ್ಪಾಲ್ ಮೂಲದ ಶಶಿಕುಮಾರ್ ಎಂಬುವರ ಮನೆ ಮುಂದೆ ಭೂಮಿ ಕುಸಿದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ತುಂಗಾ, ಭದ್ರಾ, ಹೇಮಾವತಿ ನದಿಗಳು ರಭಸದಿಂದ ಹರಿಯುತ್ತಿದ್ದು, ದಿನದಿಂದ ದಿನಕ್ಕೆ ತುಂಗಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ತುಂಗಾ ನದಿಯಲ್ಲಿ ಮರದ ದಿಮ್ಮಿಗಳು ಕೊಚ್ಚಿಕೊಂಡು ಬರಲು ಪ್ರಾರಂಭವಾಗಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಶಾರಾದಾಂಬೆ ದೇವಾಲಯದ ತುಂಗಾ ನದಿ ತಟದಲ್ಲಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಭಾರಿ ಮಳೆ ಹಿನ್ನೆಲೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದ್ದು, ಮಲೆನಾಡಿನ 34 ಗ್ರಾಮ ಪಂಚಾಯಿತಿಯ 77 ಗ್ರಾಮಗಳಿಗೆ ಅಪಾಯವಿದೆ ಎಂದು ಗುರುತು ಮಾಡಲಾಗಿದೆ.



