ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಂದು ಕೊಂಚ ಬಿಡುವು ಸಿಕ್ಕಿದೆ. ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಇಂದು ಬೆಳಗ್ಗೆ ಭೂಕುಸಿತ ಸಂಭವಿಸಿದೆ. ಮಣ್ಣು ಬಿದ್ದಿದ್ದರಿಂದ ಮನೆಗೆ ಹಾನಿಯಾಗಿದೆ. ಮನೆಯೊಳಗೆ ಸಿಲುಕಿಕೊಂಡಿದ್ದವರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜರೀನಾ (49) ಅವರನ್ನು ರಕ್ಷಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಮಾಹಿತಿ ನೀಡಿದ್ದಾರೆ. ಮುಂಜಾನೆ 6 ಗಂಟೆ ವೇಳೆಗೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ ಗುಂಪುಮನೆ ಎಂಬಲ್ಲಿ ವಾಸವಿರುವ ಮಹಮ್ಮದ್ ಎಂಬವರ ಮನೆ ಮೇಲೆ ಗುಡ್ಡ ಜರಿದುಬಿದ್ದಿದೆ. ಮಣ್ಣಿನಡಿ ಮಹಮ್ಮದ್, ಪತ್ನಿ ಝರೀನಾ ಮತ್ತು ಮಗಳು ಸಫಾ ಸಿಲುಕಿದ್ದರು. ಕೂಡಲೇ ಪಕ್ಕದ ಮನೆಯವರು ಸಂಬಂಧಪಟ್ಟವರಿಗೆ ತಿಳಿಸಿದ್ದು, ರಕ್ಷಣಾ ಕಾರ್ಯ ಕೈಗೊಳ್ಳಲಾಗಿತ್ತು. ಸ್ಥಳಕ್ಕೆ ಎನ್.ಡಿ.ಆರ್.ಎಫ್, ಪೊಲೀಸ್, ಸಿ.ಆರ್.ಎಫ್, ಅಗ್ನಿಶಾಮಕ ತಂಡ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆರೋಗ್ಯ ಇಲಾಖೆ ಸಿಬಂದಿ, ಆಯಂಬುಲೆನ್ಸ್ ಜೊತೆಗೆ ಆಗಮಿಸಿ ಅಗತ್ಯ ವ್ಯವಸ್ಥೆ ಕಲ್ಪಿಸಿದರು. ಬೆಳಗ್ಗೆ 8 ಗಂಟೆಯವರೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಇವರಲ್ಲಿ ಮಹಮ್ಮದ್ ಮತ್ತು ಸಫಾ ಅವರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಆದರೆ ಝರೀನಾ ಮಣ್ಣಿನಡಿ ಸಿಲುಕಿದ್ದರು. ಅವರನ್ನೂ ಕೂಡ ಹೊರಕ್ಕೆ ತಂದು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮಣ್ಣಿನಡಿ ಸಿಲುಕಿದ ವೇಳೆಯೇ ಪ್ರಾಣ ಹೋಗಿರಬಹುದು ಎಂದು ಹೇಳಲಾಗಿದೆ. ಮನೆಗಳು ಜಲಾವೃತ: ರಾತ್ರಿ ಹಗಲು ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮಂಗಳೂರು ನಗರದ ತೋಟಬೆಂಗ್ರೆಯಲ್ಲಿ 15 ವರ್ಷಗಳ ಬಳಿಕ ನೀರುನುಗ್ಗಿ ಸಂಪೂರ್ಣ ಜಲಾವೃತಗೊಂಡಿದೆ. ಇದರ ಪರಿಣಾಮ ಸುಮಾರು 80 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನಾಲ್ಕು ದಿನಗಳ ನಿರಂತರ ಮಳೆಯಿಂದ ತೋಟಬೆಂಗ್ರೆಯಲ್ಲಿನ ಈ ಅನಾಹುತವು ಉಂಟಾಯಿತು. ನೀರು ನುಗ್ಗಿದ ಹಿನ್ನಲೆಯಲ್ಲಿ ಮನೆಯಲ್ಲಿದ್ದ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ. ಸಧ್ಯಕ್ಕೆ ಮೋಟಾರಿನ ಸಹಾಯದಿಂದ ಮನೆಯೊಳಗಿನ ನೀರನ್ನು ಖಾಲಿ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ.



