ಎಸ್‌ಎಸ್‌ಎಲ್‌ಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಪ್ರಮುಖ ಘಟ್ಟ, ಸಾಧನೆಯ ಉತ್ತುಂಗವನ್ನೇರಲು ಸಿಗುವಂತಹ ಅತ್ಯಮೂಲ್ಯವಾದ ಸಮಯ. ಈ ಸಮಯವನ್ನು ಉಪಯೋಗಿಸಿಕೊಂಡ ಪಕ್ಷದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಪಕ್ಕಾ….! ಅನೇಕ ವಿದ್ಯಾರ್ಥಿಗಳ ಬದುಕಿನಲ್ಲಿ ೧೦ನೇ ತರಗತಿ ತಿರುವಿನ ಘಟ್ಟ ಅಂತಲೇ ಹೇಳಬಹುದು. ಈ ಘಟ್ಟದಲ್ಲಿ ಮಂಗಳೂರಿನ ಪೃಥ್ವಿ ಅವರು ಸಾಧನೆ ಮಾಡಿದ್ದಾರೆ.

ಹೌದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದು ಇತ್ತಿಚೆಗಷ್ಟೆ ಅದರ ರಿಸಲ್ಟ್ ಕೂಡ ಬಂದಿತ್ತು. ಇದರಲ್ಲಿ ಮಂಗಳೂರಿನ ಡೊಂಗರಕೇರಿ ಕೆನರಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪೃಥ್ವಿ ಅವರು 625 ಕ್ಕೆ 618 ಅಂಕಗಳನ್ನ ಪಡೆಯುವ ಮೂಲಕ ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿಕೊಟ್ಟಿದ್ದಾರೆ. ಅದಲ್ಲದೇ ಇವರು ಕೇವಲ ಶಿಕ್ಷಣದಲ್ಲಿ ಮಾತ್ರ ಎತ್ತಿದ ಕೈ ಅಲ್ಲ. ಇದರ ಜೊತೆ ಜೊತೆಗೆ ಚಿತ್ರಕಲೆಯಲ್ಲೂ ಸೈ ಎನಿಸಿಕೊಂಡವರು.

ಹೌದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಚಿತ್ರಕಲೆ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಪೃಥ್ವಿ ಅವರು 600ರಲ್ಲಿ552 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪೃಥ್ವಿ ಅವರ ಕೈ ಕುಂಚದಿ0ದ ಹುಲಿ,ಕೊಕ್ಕರೆ, ಹೂವು ಸೇರಿದಂತೆ ಅದ್ಭುತ ಕಲಾಕೃತಿಗಳು ಮೂಡಿಬಂದಿದ್ದು, ಎಲ್ಲರು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಇಷ್ಟೆಲ್ಲಾ ಮಾಡಿ ಸಾಧನೆಯ ಶಿಖರವನ್ನೇರುತ್ತಿರುವ ಪೃಥ್ವಿ ಅವರು ಮಂಗಳೂರಿನ ಪ್ರಭಾಕರ್ ಮಾಬಿಯನ್ ಹಾಗೂ ರಜನಿ ದಂಪತಿ ಪುತ್ರಿಯಾಗಿದ್ದಾರೆ. ಇವರ ಕಲಾಜೀವನ ಇನ್ನಷ್ಟು ಹಸನ್ಮುಖವಾಗಿರಲಿ ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಲಿ ಅನ್ನೋದು ಎಲ್ಲರ ಆಶಯ.



