ಬಂಟ್ವಾಳ: ಬಂಟ್ವಾಳದ ಕೆಲವೊಂದು ಗ್ರಾಮೀಣ ಭಾಗಗಳಲ್ಲಿ ಈ ಬಾರಿ ಡೆಂಗ್ಯು ಹಾವಳಿ ವ್ಯಾಪಕವಾಗಿ ಕಂಡುಬಂದಿದ್ದು, ಆದರೆ ಡೆಂಗ್ಯು ಪೀಡಿತರಲ್ಲಿ ಬಹುತೇಕ ಮಂದಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯ ಇಲಾಖೆಯ ಬಳಿ ಲೆಕ್ಕವೇ ಇಲ್ಲವಾಗಿದೆ. ಹೀಗಾಗಿ ಇಲಾಖೆಯಲ್ಲಿ ಕೇಳಿದರೆ ೨೦೨೪ರಲ್ಲಿ ಜನವರಿಯಿಂದ ಈ ವರೆಗೆ ೧೬೨ ಶಂಕಿತ ಡೆಂಗ್ಯು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ೩೫ ಮಂದಿಗೆ ಡೆಂಗ್ಯು ಖಚಿತಗೊಂಡಿತ್ತು. ಆದರೆ ಖಾಸಗಿಯನ್ನೂ ಸೇರಿಸಿದರೆ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಕಳೆದ ವರ್ಷ ಜೂನ್ವರೆಗೆ ಸುಮಾರು ೧೫೦ ಶಂಕಿತ ಪ್ರಕರಣಗಳು ಕಂಡು ಬಂದಿದ್ದವು. ಆದರೆ ಈ ವರ್ಷ ಇಲ್ಲಿಯವರೆಗೆ ಡೆಂಗ್ಯು ದೃಢ ಅಥವಾ ಶಂಕಿತ ಪ್ರಕರಣಗಳಲ್ಲಿ ಯಾರೂ ಕೂಡ ಮೃತಪಡದೇ ಇರುವುದು ಸಮಾಧಾನ ತರುವ ವಿಚಾರವಾಗಿದೆ.ಅಂದರೆ ಆರೋಗ್ಯ ಇಲಾಖೆಯು ಎಲಿಝಾ ಪರೀಕ್ಷೆ ಮಾಡಿಸಿ ಪಾಸಿಟಿವ್ ಬಂದರೆ ಮಾತ್ರ ಡೆಂಗ್ಯು ಎಂದು ಖಚಿತ ಪಡಿಸಿಕೊಳ್ಳುವುದು, ಹೀಗಾಗಿ ಖಾಸಗಿಯವರು ಮಾಡುವ ಕಾರ್ಡ್ ಟೆಸ್ಟ್ನಲ್ಲಿ ಪಾಸಿಟಿವ್ ಬಂದರೆ ಡೆಂಗ್ಯು ಎಂದು ಇಲಾಖೆ ಒಪ್ಪಿಕೊಳ್ಳುತ್ತಿಲ್ಲ. ಖಾಸಗಿ ವೈದ್ಯರು, ಆಸ್ಪತ್ರೆಗಳು ಅದನ್ನು ಡೆಂಗ್ಯು ಎಂದೇ ಪರಿಗಣಿಸಿ ಚಿಕಿತ್ಸೆ ನೀಡುತ್ತಿದೆ.

ತಾಲೂಕಿನ ದೈವಸ್ಥಳ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಣಿನಾಲ್ಕೂರು, ಸರಪಾಡಿ, ಉಳಿ ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚಿನ ಡೆಂಗ್ಯು ಪ್ರಕರಣಗಳು ಕಂಡುಬಂದಿದ್ದು, ಉಳಿದಂತೆ ಬಂಟ್ವಾಳ ಪುರಸಭೆಯೂ ಸೇರಿದಂತೆ ಇತರ ಗ್ರಾಮೀಣ ಭಾಗಗಳಲ್ಲಿ ಡೆಂಗ್ಯು ಪತ್ತೆಯಾಗಿದ್ದವು. ಬಹುತೇಕ ಮಂದಿ ಖಾಸಗಿ ವೈದ್ಯರು, ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದು, ಸಾಕಷ್ಟು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿಯೂ ಚಿಕಿತ್ಸೆ ಪಡೆದಿದ್ದಾರೆ.
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ಒಟ್ಟು ೩೬ ರೋಗಿಗಳು ಶಂಕಿತ ಡೆಂಗ್ಯು ಪ್ರಕರಣಕ್ಕೆ ದಾಖಲಾಗಿದ್ದು, ಅದರಲ್ಲಿ ೭ ಮಂದಿಗೆ ಡೆಂಗ್ಯು ಖಚಿತಗೊಂಡಿತ್ತು. ಪ್ರಸ್ತುತ ೭ ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಟ್ವಾಳದ ಸರಕಾರಿ ಆಸ್ಪತ್
ಡೆಂಗ್ಯು ತಡೆಗೆ ಆಶಾ ಕಾರ್ಯಕರ್ತರು ವಿಶೇಷ ಪ್ರಯತ್ನ ಮಾಡುತ್ತಿದ್ದು, ಆದರೆ ಅವರಿಗೆ ಸ್ಥಳೀಯ ಸಂಸ್ಥೆಗಳಾದ ಗ್ರಾ.ಪಂ., ನಗರ ಸ್ಥಳೀಯಾಡಳಿತಗಳಿಂದ ನೀರಸ ಪ್ರತಿಕ್ರಿಯೆಯ ಆರೋಪವಿದೆ. ಡೆಂಗ್ಯು ತಡೆಗೆ ಫಾಗಿಂಗ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲು ಪಂಚಾಯತ್ ಯಾವುದೇ ಸಹಕಾರ ನೀಡುತ್ತಿಲ್ಲ. ಅಲ್ಪ ಗೌರವಧನಕ್ಕೆ ದುಡಿಯುವ ನಾವೇನು ಮಾಡಲು ಸಾಧ್ಯ ಎಂದು ಆಶಾ ಕಾರ್ಯಕರ್ತೆಯರು ನೋವನ್ನು ತೋಡಿಕೊಳ್ಳುತ್ತಿದ್ದಾರೆ. ತಾಲೂಕಿನಲ್ಲಿ ಕೆಲವು ಪಂಚಾಯತ್ಗಳಲ್ಲಿ ಮಾತ್ರ ಕೆಲವಡೆ ಫಾಗಿಂಗ್ ಕಾರ್ಯ ನಡೆದಿದೆ.



