ಬೆಂಗಳೂರು: ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದ ಗೌರವಾನ್ವಿತ ಸದನ, ಕನ್ನಡಿಗರನ್ನು ಕುಚೋದ್ಯ ಮಾಡುತ್ತಿರುವಿರೇ ಎಂದು ಬಿಜೆಪಿಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ನಾವು ಭರವಸೆ ನೀಡಿದ್ದ ಮೂರನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಗೆ ಬರುತ್ತಿದೆ. ಅನ್ನಕ್ಕೆ ಕಲ್ಲು ಹಾಕುವ ಕೇಂದ್ರ ಸರ್ಕಾರದ ಕುತಂತ್ರವನ್ನೂ ಮೀರಿ ಹಣ ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನೆಡೆಯುತ್ತಿದ್ದೇವೆ. ಈಗಾಗಲೇ ನಾವು 3 ಗ್ಯಾರಂಟಿಗಳನ್ನು ನೀಡಿದರೂ ಬಿಜೆಪಿಗೆ ವಿಪಕ್ಷ ನಾಯಕ ಸಿಗುವ ಗ್ಯಾರಂಟಿ ಇಲ್ಲ. ಗೌರವಾನ್ವಿತ ಸದನವನ್ನು, ಕನ್ನಡಿಗರನ್ನು ಕುಚೋದ್ಯ ಮಾಡುತ್ತಿದೆಯೇ ಬಿಜೆಪಿ? ಎಂದು ಕೇಳಿದೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕರ್ನಾಟಕದ ಸರ್ಕಾರಕ್ಕೆ ಅಕ್ಕಿ ನೀಡಲು ನಿರಾಕರಿಸಿ, ಖಾಸಗಿ ಮಾರಾಟಕ್ಕೆ ಮುಂದಾಗಿತ್ತು ಕೇಂದ್ರ ಸರ್ಕಾರ. ಆಹಾರ ನಿಗಮದಲ್ಲಿ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರಾಟಕ್ಕಿದ್ದರೂ ಬಿಡ್ ಆಗಿದ್ದು ಕೇವಲ 170 ಮೆಟ್ರಿಕ್ ಟನ್ ಗೆ ಮಾತ್ರ. ಉಳಿದ ಅಕ್ಕಿ ಗೋದಾಮಿನಲ್ಲಿ ಕೊಳೆತು ಹೋಗಬೇಕೆ? ಅಕ್ಕಿ ಕೊಳೆತು ಹೋದರೂ ಸರಿ ಬಡವರ ಹಸಿವಿಗೆ ಅನ್ನವಾಗಬಾರದು ಎಂಬ ಮೋದಿಯ ಜನವಿರೋಧಿ ಧೋರಣೆಯಂತಹ ಕ್ರೌರ್ಯ ಇನ್ನೊಂದಿಲ್ಲ ಎಂದು ಕಿಡಿಕಾರಿದೆ.



