ಪುತ್ತೂರು: ಪುತ್ತೂರು ತಾಲೂಕಿನಾದ್ಯಂತ ಮಳೆಯಬ್ಬರ ಮುಂದುವರಿದಿದ್ದು, ಬುಧವಾರ ಬೆಳಿಗ್ಗೆ ಸ್ವಲ್ಪ ಬಿಡುವು ಕೊಟ್ಟ ವರುಣ ಮಧ್ಯಾಹ್ನ ನಂತರ ಮತ್ತಷ್ಟು ಬಿರುಸುಪಡೆದುಕೊಂಡಿದೆ. ಜಿಲ್ಲೆಯ ಜೀವನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ಇದೀಗ ಮೈದುಂಬಿ ಹರಿಯುತ್ತಿದ್ದು. ಅಪಾಯದ ಮಟ್ಟದತ್ತ ಸಾಗುತ್ತಿದೆ.

ಕಳೆದ ಎರಡು ದಿನಗಳಿಂದ ನೀರಿನ ಮಟ್ಟ 20 ಮೀಟರ್ ದಾಖಲಾಗಿದ್ದು, ಬುಧವಾರ ಸಂಜೆಗೆ ಜೀವನದಿಗಳ ಸಂಗಮ ಸ್ಥಾನವಾದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಬಳಿ ನದಿ ನೀರಿನ ಮಟ್ಟ 28.5ಕ್ಕೆ ಏರಿದೆ. ದೇವಳದ ಅಂಗಣ ಪ್ರವೇಶಕ್ಕೆ ಕೇವಲ 10 ಮೆಟ್ಟಲುಗಳಷ್ಟೇ ಉಳಿದಿದೆ. ನೀರಿನ ಮಟ್ಟ 31.5 ಮೀಟರ್ ಗೆ ಏರಿದರೆ ಎರಡೂ ನದಿಗಳ ನೀರು ದೇವಳದ ಎರಡೂ ಭಾಗಗಳಿಂದ ಆವರಿಸಿ ಬಂದು ಸಂಗಮವಾಗುತ್ತದೆ.
ಪಶ್ಚಿಮ ಘಟ್ಟ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಕಾರಣ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಬಹಳಷ್ಟು ಏರಿಕೆಯಾಗಿದೆ. ಪುತ್ತೂರು ತಾಲೂಕಿನಲ್ಲಿಯೂ ಮಳೆಯಬ್ಬರ ಹೆಚ್ಚಾಗುತ್ತಿದೆ.
ಮಳೆಗೆ ಜತೆಯಾದ ಗಾಳಿ
ಕಳೆದ ಶನಿವಾರದಿಂದ ಮಳೆಯ ಅಬ್ಬರ ಮಾತ್ರ ಕಂಡುಬರುತ್ತಿದ್ದು, ಇದೀಗ ಮಳೆಯ ಜತೆಗೆ ಗಾಳಿಯ ಅಬ್ಬರವೂ ಸೇರಿಕೊಂಡಿದೆ.




