ಕೊಣಾಜೆ: ಭಾರೀ ಗಾಳಿ ಮಳೆಗೆ ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಗೇಟ್ ಬಳಿ ಇದ್ದ ತೆಂಗಿನ ಮರವೊಂದು ವಿದ್ಯುತ್ ತಂತಿಗೆ ಬಿದ್ದು ನೆಲಕ್ಕುರುಳಿದ ಘಟನೆ ಶುಕ್ರವಾರ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ ಶಾಲೆ ಆರಂಭವಾಗುವ ಮುನ್ನ ಗಾಳಿ ಮಳೆಗೆ ತೆಂಗಿನ ಮರವು ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದ್ದು ಈ ಸಂದರ್ಭದಲ್ಲಿ ವಿದ್ಯುತ್ ಕಂಬ ಸಹಿತ ಮರವು ನೆಲಕ್ಕುರುಳಿದೆ. ಈ ಸಂದರ್ಭದಲ್ಲಿ ಕೆಲವು ಶಾಲೆಯೊಳಗಿದ್ದು, ಶಾಲಾ ಗೇಟ್ ಬಳಿ ಯಾವ ವಿದ್ಯಾರ್ಥಿಗಳೂ ಇರಲಿರಲಿಲ್ಲ. ಆದರೆ ತೆಂಗಿನ ಮರ ಉರುಳುವ ಒಂದು ನಿಮಿಷ ಮುಂಚೆಯಷ್ಟೇ ವಿದ್ಯಾರ್ಥಿಗಳು ತುಂಬಿದ್ದ ಅಟೋ ರಿಕ್ಷಾ ವೊಂದು ಇದೇ ದ್ವಾರದ ಬಂದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬಳಿಕ ಕೂಡಲೆ ಶಾಲಾ ಶಿಕ್ಷಕರು ಹಾಗೂ ಸಾರ್ವಜನಿಕರು ಗಮನಹರಿಸಿ ಮೆಸ್ಕಾಂ ಮಾಹಿತಿ ನೀಡಿ ಮರ ಹಾಗೂ ವಿದ್ಯುತ್ ತಂತಿಗಳನ್ನು ತೆರವು ಗೊಳಿಸಿದ್ದಾರೆ. ವಿದ್ಯುತ್ ತಂತಿ ಹಾಗೂ ಮರ ತೆರವು ಗೊಳಿಸಲು ಸಮಯ ಹಿಡಿದಿದ್ದು ಗೇಟ್ ನ ಒಳಗಿದ್ದ ಮಕ್ಕಳನ್ನು ಪಾಲಕರೊಂದಿಗೆ ಮನೆಗೆ ಕಳುಹಿಸಲಾಗಿದ್ದು, ಶಾಲಾ ಒಳಗಿದ್ದ ಮಕ್ಕಳಿಗೆ ಮಾತ್ರ ಪಾಠ ಮಾಡಲಾಗಿತ್ತು. ಮರ ತೆರವು ಗೊಳಿಸುವ ವೇಳೆ ಶಾಲಾ ಗೇಟ್ ಬಳಿ ಇದ್ದ ಇನ್ನೆರಡು ತೆಂಗಿನ ಮರಗಳನ್ನೂ ಮುನ್ನೆಚ್ಚರಿಕೆಯಾಗಿ ಕಡಿದು ತೆರವುಗೊಳಿಸಲಾಯಿತು.




