ಮಂಗಳೂರು, ಜು.10: ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲು ಕ್ರಾಸ್ ಬಳಿ ನಡೆದ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಅಂಗಡಿ ಮಾಲೀಕ ತೌಸಿಫ್ ಹುಸೇನ್ ಎಂಬಾತ ನೌಕರ ಗಜ್ವಾನ್ ಅಲಿಯಾಸ್ ಜಗ್ಗು ಎಂಬಾತನ ತಲೆಗೆ ಮರದ ದಿಮ್ಮಿಯಿಂದ ಹೊಡೆದು ಬಳಿಕ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಬೆಳಕಿಗೆ ಬಂದಿದೆ.
ಗಜ್ವಾನ್ ಕಳೆದ ಮೂರು ವರ್ಷಗಳಿಂದ ತೌಸಿಫ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಯ ಪಕ್ಕದ ಶೆಡ್‌ನಲ್ಲಿ ಮಲಗುತಿದ್ದ. ತೌಸಿಫ್ ಆಗಾಗ ಗಜ್ವಾನ್ ಗೆ ಹೊಡೆಯುತ್ತಿದ್ದ. ಶನಿವಾರವೂ ಗಜ್ವಾನ್ ಮೇಲೆ ಮರದ ದಿಮ್ಮಿಗಳಿಂದ ಹಲ್ಲೆ ನಡೆಸಿದ್ದಾನೆ. ಗಜ್ವಾನ್ ಪ್ರಜ್ಞೆ ತಪ್ಪಿದ ಕಾರಣ ಆರೋಪಿ ತೌಸಿಫ್ ಆತನ ದೇಹವನ್ನು ಸಮೀಪದ ಶೆಡ್‌ಗೆ ಸ್ಥಳಾಂತರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ನಂತರ ಆರೋಪಿ ತೌಸಿಫ್ ಗಜ್ವಾನ್‌ನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು, ವಿದ್ಯುತ್ ಶಾಕ್‌ನಿಂದ ಗಜ್ವಾನ್ ಸುಟ್ಟು ಹೋಗಿದ್ದಾನೆ ಎಂದು ಹೇಳಿದ್ದಾನೆ. ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ತೌಸಿಫ್ ತಪ್ಪೊಪ್ಪಿಕೊಂಡಿದ್ದಾನೆ. ಗಜ್ವಾನ್ ಅವರ ಮೃತದೇಹದ ಬಹುಪಾಲು ಭಾಗವು ತೀವ್ರವಾಗಿ ಸುಟ್ಟುಹೋಗಿದೆ. ಮರಣೋತ್ತರ ಪರೀಕ್ಷೆಯ ವರದಿ ಮಾತ್ರ ಸಾವಿನ ಕಾರಣದ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ. ಭಾನುವಾರವೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.



