ನವದೆಹಲಿ: ಮಳೆರಾಯನ ಅಬ್ಬರಕ್ಕೆ ಉತ್ತರ ಭಾರತದಲ್ಲಿ ಜಲಪ್ರವಾಹ, ಕಾರಣ ಸಾವು-ನೋವುಗಳು ಸಂಭವಿಸಿದೆ. ಜಮ್ಮು ಕಾಶ್ಮೀರ, ಉತ್ತರಾಖಂಡ, ಪಂಜಾಬ್, ಹರಿಯಾಣ, ಲಡಾಕ್ ಹಾಗು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ಮತ್ತಷ್ಟು ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ 39ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅನೇಕರು ಮನೆ-ಮಠ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ಹಾನಿ ಸಂಭವಿಸಿದೆ.
ಇದುವರೆಗೂ ಸುಮಾರು 39ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ, ಭೂ ಕುಸಿತದಿಂದ ಅಪಾರ ಹಾನಿ ಉಂಟಾಗಿದೆ. ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶದಲ್ಲಿ ಸೇರಿದಂತೆ ವಿವಿಧೆಡೆ ಭಾರತೀಯ ಸೇನೆ ಮತ್ತು ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಕಳೆದ 2 ದಿನಗಳಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ 7 ಮಂದಿ, ಉತ್ತರ ಪ್ರದೇಶದಲ್ಲಿ 3 ಮಂದಿ ಸೇರಿ ಒಟ್ಟು 39 ಮಂದಿ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ಯಮುನಾ ನದಿ ತುಂಬಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಇನ್ನು ಭಾರಿ ಮಳೆಗೆ ಹಿಮಾಚಲ ಪ್ರದೇಶಾದ್ಯಂತ ಭೂ ಕುಸಿತ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂ ಕುಸಿತದಿಂದಾಗಿ ರಸ್ತೆಗಳು ಮುಚ್ಚಲ್ಪಟ್ಟಿದ್ದು, ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಭಾರಿ ಮಳೆಗೆ ಇಲ್ಲಿನ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಹಲವೆಡೆ ಸೇತುವೆಗಳು ನದಿಯಲ್ಲಿ ಕೊಚ್ಚಿಹೋಗಿದೆ. ಅಲ್ಲದೆ ರಾಜ್ಯಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಕಳೆದ 48 ಗಂಟೆಗಳಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 3000ರಿಂದ 4000 ಸಾವಿರ ಕೋಟಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.
 
								
 
															


